ಕುಟುಂಬವಾಗಿ ಕೆಲಸ ಮಾಡಿದರೆ ಗ್ರಾಮಗಳ ಉದ್ಧಾರ ಸಾಧ್ಯ: ಎಲ್.ಕೆ.ಅತೀಕ್

ಧಾರವಾಡ, ಅ. 21: ‘ರಾಜ್ಯದಲ್ಲಿನ ಪಂಚಾಯತ್ ರಾಜ್ ಸಿಬ್ಬಂದಿ ಒಂದು ಕುಟುಂಬವಾಗಿ ಕೆಲಸ ಮಾಡಿದರೆ ಗ್ರಾಮಗಳ ಉದ್ದಾರವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಕರೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಕರ್ನಾಟಕ ವಿವಿ ಆವರಣದಲ್ಲಿನ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,‘ನರೇಗಾ ನೌಕರರು ಸಂಘಟನೆ ಅಷ್ಟೇ ಅಲ್ಲದೆ ಕ್ಷೇಮಾಭಿವೃದ್ಧಿ ಸಂಘ ಮಾಡಿಕೊಂಡಿರುವುದು ಒಳ್ಳೆಯ ಕಾರ್ಯ. ಸರಕಾರದ ಕೆಲಸದಲ್ಲಿ ಒತ್ತಡ ಜಾಸ್ತಿ ಇರುತ್ತದೆ. ಆ ಒತ್ತಡವನ್ನು ದೂರ ಮಾಡಲು ಕಾರ್ಯಕ್ರಮ ಆಯೋಜನೆ ಮಾಡಿದ್ದು, ಎಲ್ಲರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಸಲಹೆ ನೀಡಿದರು.
‘ನಮ್ಮ ಸಿಬ್ಬಂದಿ ಗ್ರಾಮಾಂತರ ಪ್ರದೇಶದಲ್ಲಿ ಗಣನೀಯ ಹಾಗೂ ಗಮನಾರ್ಹ ಬದಲಾವಣೆ ತರುತ್ತಿರುವುದು ವಿಶೇಷ. ದೇಶ ಕಟ್ಟುವಲ್ಲಿ ನಿಷ್ಟೆ, ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಬದಲಾವಣೆ ತರಬೇಕು. ಇಂತಹ ಗಣನೀಯ ಬದಲಾವಣೆಯಾದಾಗ ಮಾತ್ರ ನಮ್ಮ ಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ. ರಾಜ್ಯದಲ್ಲಿ 6 ಸಾವಿರ ಗ್ರಾ.ಪಂ.ಗಳಿದ್ದು, ಗ್ರಾಪಂ ಸಿಬ್ಬಂದಿ, ಪಿಡಿಒ, ನರೇಗಾ ಸಿಬ್ಬಂದಿ ಸಾಕಷ್ಟು ಬದಲಾವಣೆ ತಂದಿದ್ದು, ಇದರಿಂದ ರಾಜ್ಯಕ್ಕೆ ಕೀರ್ತಿ ಸಿಗಲಿದೆ' ಎಂದು ನುಡಿದರು.
‘ರಾಜ್ಯದಲ್ಲಿ 8 ಕೋಟಿ ಮಾನವ ದಿನಗಳ ಬದಲು 16 ಕೋಟಿ ಮಾನವ ದಿನಗಳ ಸೃಜನೆ ಮಾಡಿದ್ದೇವೆ. ಇದರಿಂದ ನಾಲ್ಕರಷ್ಟು ಹೆಚ್ಚು ಅನುದಾನ ಕೇಂದ್ರದಿಂದ ಬರುತ್ತಿದೆ.ನರೇಗಾದಡಿ ಆಸ್ಪತ್ರೆಯ ಹೆರಿಗೆ ಕೇಂದ್ರದಿಂದ ಹಿಡಿದು ಸ್ಮಶಾನ ಅಭಿವೃದ್ಧಿವರೆಗೆ ಕೆಲಸಮಾಡಲಾಗುತ್ತಿದೆ. ಇದರಲ್ಲಿ ಕೆಲಸ ಮಾಡುತ್ತಿರುವ ನಾವು ನೀವೆಲ್ಲರೂ ಅದೃಷ್ಟವಂತರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಗದಗ ಜಿ.ಪಂ. ಸಿಇಓ ಡಾ.ಬಿ.ಸುಶಿಲಾ, ಧಾರವಾಡ ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ, ಜಿ.ಪಂ.ಉಪಕಾರ್ಯದರ್ಶಿ ರೇಖಾ ಡೊಳ್ಳಿನ್, ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ನೆವಾಕ್ ರಾಜ್ಯಾಧ್ಯಕ್ಷ ತೇಜೇಶ್ವರ್ ಸಿ.,ಚಿದಾನಂದ ಪೂಜಾರ್, ಅರುಣ್‍ಸಿಂಗ್ರಿ ಉಪಸ್ಥಿತರಿದ್ದರು.
.jpeg)







