ಜಾಗೃತಿ

ಉದಾಸೀನತೆ, ಅಸಡ್ಡೆ ಹಾಗೂ ಸೋಮಾರಿತನದಿಂದಾಗಿ ಇತ್ತೀಚೆಗೆ ಇಡೀ ಭಾರತದಲ್ಲಿ ಬಹಳಷ್ಟು ಜನರು ಬ್ಯಾಂಕಿನಿಂದ ತಮ್ಮ ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ಸಮಯ, ಹಣ, ಶ್ರಮವು ವ್ಯರ್ಥವಾಗುತ್ತಲೇ ಇದೆ. ಸೈಬರ್ ಕ್ರೈಂಗಳು ಹೆಚ್ಚಾಗುತ್ತಲೇ ಇವೆ.
ಇತ್ತೀಚೆಗೆ ಮುಂಬೈಯ ವಸಾಯಿ ರೋಡಿನ ರಾಷ್ಟ್ರೀಕೃತ ಬ್ಯಾಂಕಲ್ಲಿ ಉಳಿತಾಯ ಖಾತೆ ಹಾಗೂ ನಿರಖು ಠೇವಣಿ ಹೊಂದಿದ್ದ ಇಂಜಿನಿಯರ್ ಒಬ್ಬರ 16,27,511 ರೂ. ನಾಪತ್ತೆಯಾಗಿತ್ತು. ಇದನ್ನು ಕಂಡ ಅವರು ಬ್ಯಾಂಕಿಗೆ ದೌಡಾಯಿಸಿ ವಿವರಣೆ ಕೇಳಿದಾಗ ಬ್ಯಾಂಕ್ ನೀಡಿದ ಉತ್ತರವು ಹೀಗಿತ್ತು. ''ನೀವು ಬ್ಯಾಂಕಲ್ಲಿ ಅಕೌಂಟ್ ತೆರೆದಾಗ ನಮಗೆ ನೀಡಿದ ಕೆವೈಸಿಯ ಮೊಬೈಲ್ ಸಂಖ್ಯೆಯನ್ನು ಬಳಸಿ ಹಣವನ್ನು ವಾಪಸ್ ಪಡೆಯಲಾಗಿದೆ.''
ಈ ಸಿಮ್ ಸಂಖ್ಯೆಯನ್ನು ಮೂರು ವರ್ಷಗಳಿಂದ ಗ್ರಾಹಕ ಇಂಜಿನಿಯರ್ ಬಳಸುತ್ತಿರಲಿಲ್ಲ. ಭಾರತೀಯ ದೂರಸಂಪರ್ಕ ನಿಯಮಾವಳಿಗಳ ಪ್ರಕಾರ ಯಾವುದೇ ಸಿಮ್ ಸಂಖ್ಯೆಗೆ ಆರು ತಿಂಗಳ ತನಕ ರಿಚಾರ್ಜ್ ಮಾಡದಿದ್ದರೆ ಆ ಸಿಮ್ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ಮರುಹಂಚಿಗೆ ಮಾಡಬಹುದು. ಹೀಗೆ ರೋಹನ್ ಬಳಸುತ್ತಿದ್ದ ಸಿಮ್ ಸಂಖ್ಯೆಯನ್ನು ಕಂಪೆನಿ ಬೇರೆ ಗ್ರಾಹಕರಿಗೆ ನೀಡಿತ್ತು. ರೋಹನ್ ತಾನು ಈ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿಲ್ಲ ಎಂದು ಬ್ಯಾಂಕಿಗೆ ತಿಳಿಸಿರಲಿಲ್ಲ. ಪ್ರಸಕ್ತ ತಾನು ಉಪಯೋಗಿಸುವ ಸಿಮ್ ಸಂಖ್ಯೆಯನ್ನು ಕೆವೈಸಿ ಅರ್ಜಿ ತುಂಬುವಾಗ ನೀಡಿರಲಿಲ್ಲ. ಹಾಗಾಗಿ ಬ್ಯಾಂಕು ಹಳೆಯ ಸಂಖ್ಯೆಗೆ ಉಳಿತಾಯ ಹಾಗೂ ನಿರಖು ಠೇವಣಿಯ ವಿವರಗಳನ್ನು ಕಳಿಸುತ್ತಿತ್ತು.
ಆ ಹಳೆಯ ಸಿಮ್ ಸಂಖ್ಯೆಯನ್ನು ಬಳಸುವ ವ್ಯಕ್ತಿಗೆ ಈಗ ಬ್ಯಾಂಕ್ ಕಳಿಸುವ ಹಣದ ವಹಿವಾಟಿನ ಎಲ್ಲಾ ವಿವರವು ಎಸ್‌ಎಂಎಸ್ ಹಾಗೂ ಇಮೇಲ್ ಮೂಲಕ ಬರಲಾರಂಭಿಸಿತು. ಅದರಲ್ಲಿನ ಲಿಂಕ್ ವಿಳಾಸದ ಮೂಲಕ ಅವರು ಬ್ಯಾಂಕ್ ವೆಬ್‌ಸೈಟಿನೊಳಗೆ ಪ್ರವೇಶಿಸಿ 'ಪಾಸ್ವರ್ಡ್ ಮರೆತುಬಿಟ್ಟಿದ್ದೇನೆ' ಎಂದು ಬರೆದರು. ಆಗ ಬ್ಯಾಂಕು ದೃಢೀಕರಣಕ್ಕಾಗಿ ಅದೇ ಸಂಖ್ಯೆಗೆ ಒಂದು ಬಾರಿ ಪಾಸ್ವರ್ಡ್ ಅಂದರೆ ಒಟಿಪಿ ಕಳಿಸಿದೆ. ಅದನ್ನು ಉಪಯೋಗಿಸಿ ಅಂತರ್ಜಾಲ ಬ್ಯಾಂಕ್ ನೆಟ್‌ವರ್ಕಿಂಗ್ ಮೂಲಕ ಎಲ್ಲಾ ಹಣವನ್ನು ಸಂತೋಷದಿಂದಲೇ ವಿಥ್ ಡ್ರಾ ಅಂದರೆ ಹಿಂದೆಗೆದುಕೊಂಡರು. ಇಂಜಿನಿಯರ್ ಹಣ ಹೀಗೆ ಬೇರೆಯವರ ಪಾಲಾಯಿತು.
ಹಾಗಾಗಿ ಬ್ಯಾಂಕ್ ಗ್ರಾಹಕರಿಗೆ ಈ ಎಚ್ಚರಿಕೆ ಇರಲಿ:
1. ಹೊಸ ಸಿಮ್ ಸಂಖ್ಯೆಯನ್ನು ಕೊಂಡು ಹಳೆಯ ಸಿಮ್‌ಗೆ ರೀಚಾರ್ಜ್ ಮಾಡದೆ ಇದ್ದಾಗ ಬ್ಯಾಂಕಿಗೆ ಲಿಂಕ್ ಮಾಡಿದ ಹಳೆಯ ಸಿಮ್ ಸಂಖ್ಯೆಯನ್ನು ಕೂಡಲೇ ಡಿ ಲಿಂಕ್ ಮಾಡಬೇಕು.
2. ಹೊಸದಾಗಿ ಕೆವೈಸಿ ನೀಡಬೇಕು.
3. ಹಿರಿಯ ನಾಗರಿಕರಿಗೆ ಈ ಅಂತರ್ಜಾಲ ಬ್ಯಾಂಕಿಂಗ್ ಕಷ್ಟಕರ ಎಂದು ಅನಿಸಿದ್ದಲ್ಲಿ ಚೆಕ್ ಮೂಲಕವೇ ಅಥವಾ ಎಟಿಎಂ ಕಾರ್ಡ್ ಮೂಲಕ ಬ್ಯಾಂಕ್ ವ್ಯವಹಾರವನ್ನು ಮಾಡಿ.
4. ಕೆವೈಸಿಯಲ್ಲಿ, ನೆಟ್ ಬ್ಯಾಂಕಿಂಗ್ ಬೇಡ ಎಂದು ನಮೂದಿಸಿ.
ಇಂತಹ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಂಡರೆ ನೀವು ಕಷ್ಟಪಟ್ಟು ದುಡಿದು ಉಳಿತಾಯ ಮಾಡಿದ ಹಣ ಎಂದಿಗೂ ನಿಮ್ಮ ಕೈತಪ್ಪಲಾರದು.







