ಕಾಂತಾರ ಸಿನಿಮಾ ಸಮಾನತೆಯ ಜಾಗೃತಿ ಮೂಡಿಸಲಿ: ಸಚಿವ ಸುನೀಲ್

ಉಡುಪಿ, ಅ.22: ನಾಟಕ, ಸಿನಿಮಾಗಳು ಕಾಲಕಾಲಕ್ಕೆ ಸಮಾಜವನ್ನು ಎಚ್ಚರಿಸಬೇಕು. ಸತ್ಯ ಹರಿಶ್ಚಂದ್ರ ನಾಟಕ ಗಾಂಧೀಜಿಯನ್ನು ಸತ್ಯ ಹೇಳುವಂತೆ ಮಾಡಿತು. ಅದೇ ರೀತಿ ಕಾಂತಾರ ಸಿನಿಮಾ ಸಮಾನತೆಯ ಜಾಗೃತಿ ಮೂಡಿಸಲಿ. ಈ ಮೂಲಕ ಸಮಾಜದಲ್ಲಿ ಬದಲಾವಣೆಗಳು ಆಗಬೇಕು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಉಡುಪಿ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲೇ ಕಾಂತಾರ ಒಳ್ಳೆಯ ಸಿನಿಮಾ. ದೈವರಾಧನೆಯನ್ನು ಬಹಳ ಚೆನ್ನಾಗಿ ಬಿಂಬಿಸಿದ್ದಾರೆ. ನಟನೆಯ ಜೊತೆ ದೈವದ ಕೃಪೆಯಿಂದ ಚಿತ್ರ ಯಶಸ್ವಿಯಾಗಿದೆ. ಕಾಂತಾರ ತುಳುನಾಡ ಸಂಸ್ಕೃತಿಗೆ ಸಿಕ್ಕ ಗೌರವವಾಗಿದೆ. ನಂಬಿಕೆಯಿಂದ ದೂರ ಇರುವವರು ಅದನ್ನು ಆಕ್ಷೇಪಿಸು ತ್ತಾರೆ. ದೈವ ಎಂಬುದು ನಮ್ಮ ನಂಬಿಕೆ. ದೈವದ ಮೂಲಕ ನಮ್ಮ ದಿನಚರಿ ಆರಂಭವಾಗುತ್ತದೆ. ನಂಬಿಕೆ ಸಂಸ್ಕೃತಿ ಇಲ್ಲದವರು ವ್ಯತರಿಕ್ತವಾಗಿ ಮಾತನಾಡು ತ್ತಾರೆ. ನಂಬಿಕೆ ಶ್ರದ್ಧೆ ಇರುವವರು ಅದಕ್ಕೆ ಪ್ರತಿಕ್ರಿಯೆ ಕೊಡಬೇಕಾಗಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಬಹಳ ತಡವಾಗಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಎಚ್ಚೆತ್ತುಕೊಂಡಿದೆ. ಕಾಂಗ್ರೆಸ್ ಕಪಿಮುಷ್ಠಿಯಲ್ಲಿಟ್ಟು ಕೊಳ್ಳಲು ಹಿರಿಯ ಮುತ್ಸದ್ಧಿಯ ಆಯ್ಕೆ ಮಾಡಲಾಗಿದೆ. ಆಡಳಿತವನ್ನು ಗಾಂಧಿ ಕುಟುಂಬವೇ ನಡೆಸಬೇಕು ಎಂಬ ಇರಾದೆ ಇದೆ. ಮಲ್ಲಿಕಾರ್ಜುನ ಖರ್ಗೆ ನೆಪ ಮಾತ್ರ ಅಧ್ಯಕ್ಷ ಎಂದು ಅವರು ಟೀಕಿಸಿದರು.
ಬಿಜೆಪಿಯಲ್ಲಿ ಬೂತ್‌ನಿಂದ ರಾಷ್ಟ್ರಾಧ್ಯಕ್ಷರ ವರೆಗೆ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಬಿಜೆಪಿ ಆಂತರಿಕ ಚುನಾವಣೆ ಆರು ತಿಂಗಳುಗಳ ಸುಧೀರ್ಘ ಅವಧಿಯಲ್ಲಿ ನಡೆಯುತ್ತದೆ ಎಂದ ಅವರು, ಸಮೀಕ್ಷೆಗಳ ಮೇಲೆ ನಾವು ಚುನಾವಣೆ ಎದುರಿಸುವುದಿಲ್ಲ. ಕಾರ್ಯಕರ್ತರು ಅಭಿವೃದ್ಧಿ ನಮ್ಮ ಸಾಧನೆಯ ಮೇಲೆ ಚುನಾವಣೆಗೆ ಹೋಗುತ್ತೇವೆ ಎಂದು ಅವರು ತಿಳಿಸಿದರು.







