ಕಾಣಿಯೂರು ಹಲ್ಲೆ ಪ್ರಕರಣ; ಮುಖ್ಯಮಂತ್ರಿಯ ‘ಯುಪಿ ಮಾದರಿ’ಯ ಪ್ರಾತ್ಯಕ್ಷಿಕೆ: ದ.ಕ.ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪ
ಕೆ.ಕೆ.ಶಾಹುಲ್ ಹಮೀದ್
ಮಂಗಳೂರು, ಅ.22: ಕಡಬ ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಮೊನ್ನೆ ಇಬ್ಬರು ಬೆಡ್ಶೀಟ್ ವ್ಯಾಪಾರಿಗಳ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ಯುಪಿ ಮಾದರಿ’ಯ ಪ್ರಾತ್ಯಕ್ಷಿಕೆಯಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇವಲ ಬ್ಯಾರಿ-ಮುಸ್ಲಿಮರು ಎಂಬ ಕಾರಣಕ್ಕೆ ಸಂಘಪರಿವಾರ-ಬಿಜೆಪಿಯ ಸುಮಾರು 60 ಕ್ಕೂ ಅಧಿಕ ಕಾರ್ಯಕರ್ತರು ಇಬ್ಬರು ಬೆಡ್ಶೀಟ್ ವ್ಯಾಪಾರಿಗಳನ್ನು ಅಮಾನುಷವಾಗಿ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ್ದಾರೆ. ಅದರಲ್ಲಿ ಕಾಣಿಯೂರು ಗ್ರಾಮದ ಅಧ್ಯಕ್ಷ-ಉಪಾಧ್ಯಕ್ಷರು ಕೂಡ ನೇರ ಶಾಮೀಲಾಗಿದ್ದಾರೆ. ಹಲ್ಲೆ ನಡೆಸಿದ ದೃಶ್ಯದ ವೀಡಿಯೋ ವೈರಲ್ ಆಗಿದ್ದರೂ ಕೂಡ ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಕಠಿಣ ಸೆಕ್ಷನ್ನಡಿ ಪ್ರಕರಣ ದಾಖಲಿಸಬೇಕಿದ್ದ ಪೊಲೀಸರು ಜಾಮೀನು ಲಭಿಸುವಂತಹ ಸೆಕ್ಷನ್ ಹಾಕಿ ಸುಮ್ಮನಾಗಿದ್ದಾರೆ. ಹಲ್ಲೆಕೋರರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದ ಬೆಳ್ಳಾರೆ ಠಾಣಾಧಿಕಾರಿಯ ವಿರುದ್ಧವೂ ಶಿಸ್ತುಕ್ರಮ ಜರಗಿಸಬೇಕು. ಇಲ್ಲದಿದ್ದರೆ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸತತ ಎರಡು ಗಂಟೆಗಳ ಕಾಲ ನಡೆದ ಹಲ್ಲೆಯಿಂದ ತತ್ತರಿಸಿರುವ ಬೆಡ್ಶೀಟ್ ವ್ಯಾಪಾರಿಗಳ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರಗಿಸಬೇಕಿದ್ದ ಪೊಲೀಸರು ಸಂತ್ರಸ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯವು ಮರೀಚಿಕೆಯಾಗಿದೆ. ಹಾಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಕೆ.ಕೆ.ಶಾಹುಲ್ ಹಮೀದ್ ಆಗ್ರಹಿಸಿದರು.
ಬೆಡ್ಶೀಟ್ ವ್ಯಾಪಾರಿಗಳನ್ನು ರೈಲು ಹಳಿಯ ಮೇಲಿಟ್ಟು ಕೊಲ್ಲುವ ಯೋಚನೆಯೂ ದುಷ್ಕರ್ಮಿಗಳಿಗಿತ್ತು. ಆದರೆ ಹಲ್ಲೆಯಿಂದ ಪ್ರಜ್ಞೆ ಕಳಕೊಂಡು ಕಾರಣ ಅಲ್ಲೇ ಬಿಟ್ಟು ಹೋದರು. ಪರಿಸ್ಥಿತಿ ಗಂಭೀರವಾಗಿದ್ದರೂ ಪೊಲೀಸರು ಈ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಲಿಲ್ಲ. ತಕ್ಷಣ ಎಡಿಜಿಪಿ ಮತ್ತು ದ.ಕ.ಜಿಲ್ಲಾ ಎಸ್ಪಿ ಹಲ್ಲೆಗೊಳಗಾದ ಯುವಕರನ್ನು ಭೇಟಿ ನೀಡಿ ಧೈರ್ಯತುಂಬುವ ಕೆಲಸ ಮಾಡಬೇಕು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದು ಕೆ.ಕೆ.ಶಾಹುಲ್ ಹಮೀದ್ ಒತ್ತಾಯಿಸಿದರು.
ಚುನಾವಣೆಗೆ ಇನ್ನು ಕೇವಲ 200 ದಿನಗಳು ಮಾತ್ರ ಇವೆ. ಆಡಳಿತ ನಡೆಸುವಲ್ಲಿ ವಿಫಲವಾದ ಬಿಜೆಪಿಯು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಇಂತಹ ಕೋಮುಸೂಕ್ಷ್ಮ ವಿಚಾರ ಮುಂದಿಟ್ಟು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಹಾಗಾಗಿ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಪೊಲೀಸರ ತಾರತಮ್ಯದ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಶಾಹುಲ್ ಹಮೀದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹೀಂ, ಸಬಿತಾ ಮಿಸ್ಕಿತ್, ಮಯ್ಯದ್ದಿ, ಇಸಾಕ್ ಸಾಲ್ಮರ, ಫಾರೂಕ್ ಬಾಯಬೆ. ಸಂಶುದ್ದೀನ್ ಅಡ್ಯನಡ್ಕ, ಹನೀಫ್ ಜೋಕಟ್ಟೆ, ಶಬ್ಬೀರ್ ಸಿದ್ಧಕಟ್ಟೆ, ಶರೀಫ್ ವಳಾಲ್, ರಿಯಾಝ್ ಅಮೆಮ್ಮಾರ್, ಮಕ್ಬೂಲ್ ಕುದ್ರೋಳಿ, ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಬಜ್ಪೆ ಉಪಸ್ಥಿತರಿದ್ದರು.