ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಿಲ್ಲೊಂದು ಸಮಸ್ಯೆ, ಜಿಲ್ಲಾಧಿಕಾರಿ ವರ್ಗಾವಣೆ ಸರಿಯಲ್ಲ: ಮಹೇಶ್ ಜೋಶಿ ಅಸಮಾಧಾನ
ಬೆಂಗಳೂರು, ಅ. 22: ಹಾವೇರಿಯಲ್ಲಿ ನಡೆಯಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಾದ ಮೇಲೊಂದು ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ಶಾಪಗ್ರಸ್ತ ಸಮ್ಮೇಳನವಾಗುತ್ತಿದ್ದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಸಮ್ಮೇಳನದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಹಾವೇರಿ ಜಿಲ್ಲಾಧಿಕಾರಿಯಾಗಿದ್ದ ಎಸ್.ಬಿ. ಶೆಟ್ಟಣ್ಣನವರ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಶನಿವಾರ ಪ್ರಕಟನೆ ನೀಡಿರುವ ಅವರು, ಆಡಳಿತ ಸುಧಾರಣೆಯ ಹೆಸರಿನಲ್ಲಿ ಕೆಲ ಐಎಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆ. ಕಾಲ ಕಾಲಕ್ಕೆ ಆಡಳಿತದದೃಷ್ಟಿಯಿಂದ ಅಧಿಕಾರಿಗಳ ವರ್ಗಾವಣೆ ಮಾಡುವುದಕ್ಕೆ ಆಕ್ಷೇಪ ಇಲ್ಲ. ಆದರೆ, ಕೆಲವು ಮಹತ್ವದ ಯೋಜನೆಗಳು, ಕಾರ್ಯಗಳು ಜಾರಿಯಲ್ಲಿ ಇರುವಾಗ ಆ ಭಾಗದ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಅಂಥವರನ್ನು ವರ್ಗಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನೆಮಾಡಿದ್ದಾರೆ.
ಮುಂದೂಡಲ್ಪಡುತ್ತಿರುವ ಈ ಸಮ್ಮೇಳನ ಕೊನೆಗೂ ಬರುವ ಜ.6, 7 ಹಾಗೂ 8ರಂದು ನಡೆಸಲು ಸರಕಾರ ಘೋಷಿಸಿದೆ. ಅದಕ್ಕೆ ತಕ್ಕಂತೆ ಕಸಾಪ ಮತ್ತು ಹಾವೇರಿ ಜಿಲ್ಲಾಡಳಿತ ಸೇರಿ ಸಕಾಲ ಸಿದ್ಧತೆಗಳನ್ನು ಹಮ್ಮಿಕೊಂಡಿತ್ತು. ಇದೇ ತಿಂಗಳ 27 ರಂದು ಹಾವೇರಿಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಗಳು ಸೇರಿದಂತೆ ತಜ್ಞರ ಸಭೆಯನ್ನೂ ಕರೆಯಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.