ಕುಕ್ಕೆಹಳ್ಳಿ: ಆತ್ಮಹತ್ಯೆಯಂತೆ ಬಿಂಬಿಸಿ ಯುವಕನ ಕೊಲೆ; ಬಂಧಿತ ಆರೋಪಿಗೆ ಎರಡು ದಿನ ಪೊಲೀಸ್ ಕಸ್ಟಡಿಗೆ

ಬಂಧಿತ ಆರೋಪಿ ದಿನೇಶ ಸಫಲಿಗ
ಹಿರಿಯಡ್ಕ, ಅ.22: ತಿಂಗಳ ಹಿಂದೆ ನಡೆದ ಕುಕ್ಕೆಹಳ್ಳಿ ಗ್ರಾಮದ ಬಜೆ ನಿವಾಸಿ ಕೃತಿಕ ಜೆ.ಸಾಲಿಯಾನ್(22) ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಹಣಕ್ಕಾಗಿ ಸಂಬಂಧಿಕನೇ ಹತ್ಯೆಗೈದಿರುವುದು ತನಿಖೆಯಿಂದ ತಿಳಿದು ಬಂದಿದೆ.
ಕುಕ್ಕೆಹಳ್ಳಿ ನಿವಾಸಿ ದಿನೇಶ ಸಫಲಿಗ (42) ಬಂಧಿತ ಕೊಲೆ ಆರೋಪಿ. ಬಂಧಿತ ಆರೋಪಿಯನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಸೆ.14ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ-ಬಜೆ ಎಂಬಲ್ಲಿನ ಹಾಡಿಯಲ್ಲಿ ಕೃತಿಕ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು. ಬಳಿಕ ಮೃತ ಕೃತಿಕ ಸಂಬಂಧಿಕರು ಕೃತಿಕನ ಸಾವು ಹಾಗೂ ಆತನ ಬ್ಯಾಂಕ್ನಲ್ಲಿದ್ದ ಲಕ್ಷಾಂತರ ರೂ. ಹಣ ಸಂಪೂರ್ಣ ಡ್ರಾ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಅದರಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಹಿರಿಯಡ್ಕ ಎಸ್ಸೈ ಅನಿಲ್ ಬಿ.ಎಂ. ತಂಡ ಮೃತನ ಬ್ಯಾಂಕ್ ಖಾತೆಯ ಮಾಹಿತಿ, ಬ್ಯಾಂಕಿನ ಸಿಸಿಟಿವಿ, ಸ್ಥಳೀಯ ಮಾಹಿತಿ, ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಪೋನ್ ಮಾಹಿತಿಗಳನ್ನು ಸಂಗ್ರಹಿಸಿ ಗೆಳೆಯರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಸಂಬಂಧಿ ದಿನೇಶ ಸಫಲಿಗನ ಬಗ್ಗೆ ಮಾಹಿತಿ ಕಲೆ ಹಾಕಿದರು. ಅಲ್ಲದೆ ಅವರೊಳಗೆ ಹಣದ ವ್ಯವಹಾರ ನಡೆದಿರುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿದರು.
ಮರಣ ಪತ್ರ ಬರೆಸಿದನು
ಈ ಹಿಂದೆ 10 ವರ್ಷಗಳ ಕಾಲ ಮುಂಬೈಯ ಹೋಟೆಲ್ನಲ್ಲಿ ಉದ್ಯೋಗಿ ಯಾಗಿದ್ದ ದಿನೇಶ್, ಹಣದ ಸಮಸ್ಯೆಯಿಂದ ಊರಿಗೆ ಬಂದಿದ್ದನು. ಸಂಬಂಧಿಕ ಕೃತಿಕನ ಗೆಳೆತನ ಬೆಳೆಸಿಕೊಂಡು ಆತನಿಂದ ಸುಮಾರು 9 ಲಕ್ಷಕ್ಕೂ ಅಧಿಕ ಹಣ ವನ್ನು ಸಾಲವಾಗಿ ಪಡೆದುಕೊಂಡಿದ್ದರು.
ಹಣವನ್ನು ಹಿಂತಿರುಗಿಸುವಂತೆ ಕೃತಿಕ ಪದೇಪದೇ ದಿನೇಶ್ನಲ್ಲಿ ಕೇಳುತ್ತಿದ್ದನು. ಈತನಿಂದ ಹಣ ಕೊಡದೇ ಪಾರಾಗಲು ಪೂರ್ವಯೋಜನೆಯನ್ನು ಮಾಡಿದ್ದ ದಿನೇಶ, ಕೃತಿಕನ ಮನೋದೌರ್ಬಲ್ಯವನ್ನು ಉಪಯೋಗಿಸಿ ಕೊಂಡು ಕೃತಿಕನ ಪರಿಚಯವಿರುವ ಮಹಿಳೆಯ ಹೆಸರಿನಲ್ಲಿ ಒಂದು ಡೆತ್ನೋಟು ಬರೆದನು.
ಉಪಾಯದಿಂದ ಕೊಲೆ
ಆ ಮಹಿಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆಯಿಸಿ ಆತ್ಮಹತ್ಯೆಯ ಅಣಕು ವಿಡಿಯೋವನ್ನು ಮಾಡಿ ಆ ಮಹಿಳೆಗೆ ಕಳುಹಿಸಿದರೆ ಆಕೆಯು ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ ಎಂದು ದಿನೇಶ್, ಕೃತಿಕನನ್ನು ನಂಬಿಸಿದನು.
ಸೆ.14ರಂದು ಮನೆಯ ಹತ್ತಿರದ ಹಾಡಿಗೆ ಬರ ಮಾಡಿಕೊಂಡ ದಿನೇಶ, ಕುಣಿಕೆ ಹಗ್ಗವನ್ನು ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕನ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸಿ ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ಹತ್ತಿಸಿ, ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡಿ, ಕೃತಿಕನನ್ನು ಎತ್ತಿದ ಕೈಯನ್ನು ತಾನು ಒಮ್ಮೆಲೆ ಬಿಟ್ಟಿರುತ್ತಾನೆ. ಅಲ್ಲದೇ ಕಾಲಿನ ಕೆಳಗೆ ಇದ್ದ ಕಲ್ಲನ್ನು ಜಾರಿಯಿಸಿದ ಪರಿಣಾಮವಾಗಿ ಕುತ್ತಿಗೆಗೆ ಕುಣಿಕೆಯ ಹಗ್ಗ ಬಿಗಿದು ಕೃತಿಕ್ ಮೃತಪಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ದಿನೇಶ್ ತಾನು ಪಡೆದ ಸಾಲವನ್ನು ತೀರಿಸಬಾರದೆಂದು ಎಂಬ ಕಾರಣಕ್ಕಾಗಿ ಕೃತಿಕನನ್ನು ಅತ್ಯಂತ ಉಪಾಯದಿಂದ ಪೂರ್ವಯೋಜನೆ ಮಾಡಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ್ದನು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.







