36 ವನ್ವೆಬ್ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋದ ಅತ್ಯಂತ ಭಾರದ ರಾಕೆಟ್

(Image Source: Twitter/@OneWeb )
ಹೊಸದಿಲ್ಲಿ,ಆ.23: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ರವಿವಾರ ಉಡಾವಣೆಗೊಳಿಸಿರುವ ಅತ್ಯಂತ ಭಾರದ ಎವಿಎಂ3-ಎಂ2 ರಾಕೆಟ್ ಬ್ರಿಟಿಶ್ ಕಂಪೆನಿಯೊಂದರ 36 ಬ್ರಾಡ್ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷ ಕಕ್ಷೆಯಲ್ಲಿ ಸ್ಥಾಪಿಸಿದೆ. ಇದರೊಂದಿಗೆ ಇಸ್ರೋದ ಸಾಧನೆಯ ತುರಾಯಿಗೆ ಇನ್ನೊಂದು ಗರಿ ಸೇರ್ಪಡೆಯಾದಂತಾಗಿದೆ.
ವಾಣಿಜ್ಯ ಉದ್ದೇಕ್ಕಾಗಿಯೇ ಇಸ್ರೋ ನಡೆಸಿದ ಪ್ರಪ್ರಥಮ ಉಡಾವಣೆ ಇದಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಉಡಾವಣೆಯಾದ ಉಪಗ್ರಹಗಳು ಬ್ರಿಟನ್ ಮೂಲದ ಒನ್ವೆಬ್ ಲಿಮಿಟೆಡ್ ಕಂಪೆನಿಗೆ ಸೇರಿದ್ದಾಗಿವೆ, ತನ್ನ ಉಪಗ್ರಹಗಳ ಉಡಾವಣೆಗಾಗಿ ಒನ್ವೆಬ್ ಲಿಮಿಟೆಡ್ , ಇಸ್ರೋದ ವಾಣಿಜ್ಯ ಘಟಕವಾದ ನ್ಯೂಸ್ಪೇಸ್ ಇಂಡಿಯಾ ಜೊತೆ ವಾಣಿಜ್ಯ ಒಡಂಬಡಿಕೆಯನ್ನು ಏರ್ಪಡಿಸಿಕೊಂಡಿತ್ತು. ಹೊಸದಿಲ್ಲಿ ಮೂಲದ ಉದ್ಯಮ ಸಮೂಹ ಭಾರ್ತಿ ಎಂಟರ್ಪ್ರೈಸಸ್ ಒನ್ವೆಬ್ ಪ್ರಮುಖ ಹೂಡಿಕೆದಾರರಾಗಿದ್ದಾರೆ.
ಎಲ್ವಿಎಂ3-ಎಂ2 ರಾಕೆಟ್ ರವಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಎರಡನೆ ಲಾಂಚ್ಪ್ಯಾಡ್ನಿಂದ ಉಡಾವಣೆಗೊಳಿಸಲಾಗಿದೆ. ರಾಕೆಟ್ ಉಡಾವಣೆಯಾದ 75 ನಿಮಿಷಗಳ ಬಳಿಕ ಎಲ್ಲಾ 36 ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸಲಾಯಿತೆಂದು ಮೂಲಗಳು ತಿಳಿಸಿವೆ.ಈ ರಾಕೆಟ್ 5796 ಕಿ.ಗ್ರಾಂ. ತೂಕದ ಪೇಲೋಡನ್ನು ಕೊಂಡೊಯ್ದಿದೆ. ಎಲ್ವಿಎಂ3- ಎಂ2 ರಾಕೆಟ್ ಭೂಮಿಯ ಕೆಳಕಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಉಪಗ್ರಹಗಳನ್ನು ಸ್ಥಾಪಿಸಿರುವುದು ಇದೇ ಮೊದಲ ಸಲವಾಗಿದೆ.
ಏಕಕಾಲಕ್ಕೆ 36 ಉಪಗ್ರಹಗಳ ಯಶಸ್ವಿ ಉಡಾವಣೆಗೆ ಹರ್ಷ ವ್ಯಕ್ತಪಡಿಸಿರುವ ಇಸ್ರೋ ವರಿಷ್ಠ ಎಸ್.ಸೋಮವಾಥ್ ಅವರು, ಸಂಸ್ಥೆಯ ವಿಜ್ಞಾನಿಗಳಿಗೆ ದೀಪಾವಳಿ ಬೇಗನೆ ಆರಂಭಗೊಂಡಿದೆ ಎಂದರು.ಅವಕಾಶವೊಂದನ್ನು ಬಾಚಿಕೊಂಡು, ಅದನ್ನು ಐತಿಹಾಸಿಕ ಮಿಶನ್ಗಾಗಿ ಸಿದ್ಧಪಡಿಸಿದ ಸಮಸ್ತ ತಂಡಕ್ಕೆ ಅಭಿನಂದನೆಗಳು ಎಂದು ಅವು ಹೇಳಿದ್ದಾರೆ. ಉಪಗ್ರಹಗಳ ಉಡಾವಗಾಗಿ ಎಲ್ವಿಎಂ3 ರಾಕೆಟ್ ಬಗ್ಗೆ ವಿಶ್ವಾಸವಿರಿಸಿದ್ದಕ್ಕಾಗಿ ಓನ್ ವೆಬ್ ತಂಡಕ್ಕೂ ಅವರು ಕೃತಜ್ಞತೆಯನ್ನು ಸಲ್ಲಿಸಿದರು.ಎಲ್ವಿಎಂ 3 ಮೂಲಕ ಇನ್ನೂ 36 ಉಪಗ್ರಹಗಳ ಉಡಾವಣೆಗೆ ಎನ್ಎಸ್ಐಎಲ್ ಒಪ್ಪಂದ ಮಾಡಿಕೊಂಡಿದ್ದು, ಆ ಮಿಶನ್ ಕೂಡಾ ಯಶಸ್ವಿಯಾಗಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.ಬ್ರಿಟನ್ ಮೂಲದ ಓನ್ವೆಬ್ ಲಿಮಿಟೆಡ್ ಇಸ್ರೋದ ವಾಣಿಜ್ಯ ಘಟಕವಾದ ಎನ್ಎಸ್ಐಎಲ್ನ ಗ್ರಾಹಕನಾಗಿದ್ದು, ಬಾಹ್ಯಾಕಾಶದಿಂದ ಜಾಗತಿಕ ಸಂವಹನ ಜಾಲವನ್ನು ನಿರ್ವಹಿಸುತ್ತಿದ್ದು, ಸರಕಾರಗಳ ಹಾಗೂ ಉದ್ಯಮಸಂಸ್ಥೆಗಳಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ.
ಆತ್ಮನಿರ್ಭರತೆಗೆ ನಿದರ್ಶನ: ಪ್ರಧಾನಿ
ಹೊಸದಿಲ್ಲಿ,ಆ.23: ಅತ್ಯಂತ ಭಾರದ ರಾಕೆಟ್ ಎಲ್ವಿಎಂ3 ಮೂಲಕ ಓವ್ವೆಬ್ ಕಂಪೆನಿಯ 36 ಉಪಗ್ರಹಗಳ ಕಕ್ಷೆಯಲ್ಲಿ ಯಶಸ್ವಿಯಾಗಿ ಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ಹಾಗೂ ಅದರ ವಾಣಿಜ್ಯ ಘಟಕವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಹಾಗೂ ಎನ್-ಸ್ಪೇಸ್ ಸಂಸ್ಥೆಯನ್ನು ಅಭಿನಂದಿಸಿದ್ದಾರೆ.
ಆತ್ಮನಿರ್ಭರತೆಗೆ ಎಲ್ವಿಎಂ3 ನಿದರ್ಶನವಾಗಿದೆ ಹಾಗೂ ಜಾಗತಿಕ ವಾಣಿಜ್ಯ ಉಪಗ್ರಹ ಉಡಾವಣಾ ಸೇವಾ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ವೃದ್ಧಿಸಿದೆ’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.







