ಲಕ್ನೊ: ಮನೆಯಲ್ಲಿ ಅಗ್ನಿ ಅನಾಹುತ; ನಿವೃತ್ತ ಪೊಲೀಸ್ ಐಜಿ ಮೃತ್ಯು, ಇಬ್ಬರಿಗೆ ಗಾಯ

Photo:PTI
ಲಕ್ನೊ: ಲಕ್ನೊದ ಇಂದಿರಾನಗರ ಪ್ರದೇಶದಲ್ಲಿನ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿ) ಸಾವನ್ನಪ್ಪಿದ್ದು, ಅವರ ಪತ್ನಿ ಹಾಗೂ ಮಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ನಿವೃತ್ತ ಐಜಿ ಡಿ.ಸಿ. ಪಾಂಡೆ ಅವರ ಮನೆಯ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅವರು ಹಾಗೂ ಅವರ ಕುಟುಂಬ ಬೆಂಕಿಯಲ್ಲಿ ಸಿಲುಕಿತ್ತು ಎಂದು ಘಾಜಿಪುರ ಪೊಲೀಸ್ ಠಾಣೆಯ ಎಸ್ಎಚ್ಒ ಮನೋಜ್ ಕುಮಾರ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಡಿ.ಸಿ. ಪಾಂಡೆ (70 ವರ್ಷ), ಅವರ ಪತ್ನಿ ಅರುಣಾ ಹಾಗೂ ಪುತ್ರ ಶಶಾಂಕ್ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿದರು.
ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಿಸ್ತೃತ ತನಿಖೆ ನಡೆಯುತ್ತಿದ್ದು, ಬೆಂಕಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.







