ನ.11ಕ್ಕೆ ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ: ಸಚಿವ ಡಾ.ಅಶ್ವತ್ಥ ನಾರಾಯಣ
ಬೆಂಗಳೂರು, ಅ. 23: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಅನಾವರಣ ಪ್ರಯುಕ್ತ ನಾಡಿನಾದ್ಯಂತ ಹಮ್ಮಿಕೊಂಡಿರುವ ಮೃತ್ತಿಕಾ ಸಂಗ್ರಹ ಅಭಿಯಾನಕ್ಕೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಮಣ್ಣನ್ನು ಸಂಗ್ರಹಿಸುವ ವಾಹನವು ಬೆಳಗ್ಗೆ ಜಿಲ್ಲೆಯ ಗಡಿಯನ್ನು ಹೆಜ್ಜಾಲದಲ್ಲಿ ಪ್ರವೇಶಿಸುತ್ತಿದ್ದಂತೆಯೇ ಜನರು ನೂರಾರು ಬೈಕ್‍ಗಳಲ್ಲಿ ಹಾಗೂ ಬೇರೆ ವಾಹನಗಳಲ್ಲಿ ಬಂದು ಸ್ವಾಗತಿಸಿದರು. ಅಲ್ಲಿಂದ ಸಂಭ್ರಮದ ಘೋಷಣೆಗಳ ನಡುವೆ ರಾಮನಗರದ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲಾಯಿತು. ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಮತ್ತು ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಸೇರಿದಂತೆ ಅಪಾರ ಸಂಖ್ಯೆಯ ಜನರು ಅಭಿಯಾನವನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನ.11ಕ್ಕೆ ಪ್ರಧಾನಿ ಮೋದಿ ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸುತ್ತಾರೆ. ಈ ಕಾರ್ಯಕ್ರಮವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಸಲುವಾಗಿ ರಾಜ್ಯದ ಎಲ್ಲ ಸ್ಥಳಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ. ಈ ಮಣ್ಣನ್ನು ಪ್ರತಿಮೆಯ ಉದ್ದೇಶಿತ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಇದು ರಾಜಧಾನಿಯನ್ನು ನಿರ್ಮಿಸಿದ ಕೆಂಪೇಗೌಡರಿಗೆ ನಾಡಿನ ಜನರು ಸಲ್ಲಿಸುವ ಗೌರವವಾಗಿರುತ್ತದೆ ಎಂದರು.
ಮೊದಲಿಗೆ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿಂದ ಮಣ್ಣು ಸಂಗ್ರಹಿಸಿದರು. ಬಳಿಕ ಕೆಂಗಲ್‍ಗೆ ತೆರಳಿದ ಸಚಿವರು ಅಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಮೃತ್ತಿಕೆ ಸಂಗ್ರಹಿಸಿದರು. ಕೆಂಗಲ್ ದೇವಸ್ಥಾನದ ನಂತರ ಕೆಂಗಲ್ ಹನುಮಂತಯ್ಯ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು. ಈ ವೇಳೆ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಜಿಲ್ಲಾಧಿಕಾರಿ ಅವಿನಾಶ ಮೆನನ್, ಎಸ್ಪಿ ಸಂತೋಷ ಬಾಬು, ಜಿಲ್ಲಾಧ್ಯಕ್ಷ ದೇವರಾಜು, ರೇಶ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ, ಮಾಗಡಿ ತಾಲೂಕಿನ ಮುಖಂಡ ಪ್ರಸಾದ ಗೌಡ ಹಾಜರಿದ್ದರು.