ಏಶ್ಯದ ಟಾಪ್ 10 ಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ಭಾರತದ 8 ನಗರಗಳು
ಗುರುಗ್ರಾಮಕ್ಕೆ ಮೊದಲ ಸ್ಥಾನ; ಪಟ್ಟಿಯಿಂದ ಹೊರಬಿದ್ದ ದಿಲ್ಲಿ

PHOTO: PTI
ಹೊಸದಿಲ್ಲಿ,ಅ.23: ಏಶ್ಯದ ಟಾಪರ್ 10 ಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ಭಾರತದ ಎಂಟು ನಗರಗಳು ಸ್ಥಾನ ಪಡೆದಿವೆ. ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕ ಸಂಸ್ಥೆಯು ಈ ಪಟ್ಟಿಯನ್ನು ರವಿವಾರ ಬಿಡುಗಡೆಗೊಳಿಸಿದೆ. ಇದೇ ವೇಳೆ ಆಂಧ್ರಪ್ರದೇಶದ ರಾಜಮಹೇಂದ್ರಾವರಂ ಜಗತ್ತಿನ ಟಾಪ್ 10 ಅತ್ಯುತ್ತಮ ವಾಯುಗುಣಮಟ್ಟದ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಫಲವಾಗಿರುವ ಭಾರತದ ಏಕೈಕ ನಗರವಾಗಿದೆ.
ಗುರುಗ್ರಾಮ ನಗರವು ಅತ್ಯಂತ ಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಅಲ್ಲಿ ರವಿವಾರ ಬೆಳಗ್ಗೆ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) 679 ಆಗಿತ್ತು. ಹರ್ಯಾಣದ ರೇವಾರಿ ಸಮೀಪದ ಧಾರುಹೆರಾ ಪಟ್ಟಣವು 543 ಎಕ್ಯೂಐನೊಂದಿಗೆ ಆನಂತರದ ಸ್ಥಾನದಲ್ಲಿದೆ. ಬಿಹಾರದ ಮುಝಫರ್ಪುರದ ಎಕ್ಯೂಐ 316 ಆಗಿದ್ದು, ತೃತೀಯ ಸ್ಥಾನದಲ್ಲಿದೆ. ಆದರೆ ದಿಲ್ಲಿಯು ಏಶ್ಯದ ಟಾಪ್ 10 ಮಾಲಿನ್ಯಪೀಡಿತ ನಗರಗಳ ಪಟ್ಟಿಯಿಂದ ಈ ಸಲ ಹೊರಬಿದ್ದಿರುವುದು ಗಮನಾರ್ಹವಾಗಿದೆ.ಲಕ್ನೋದ ತಾಲ್ಕಟೋರ್ (ಎಕ್ಯೂಐ 298), ಡಿಆರ್ಸಿಸಿ ಆನಂದಪುರ, ಬೆಗುಸರಾಯ್ ( ಎಕ್ಯೂಐ 269), ಭೋಪಾಲ್ ಚೌರಾಹ, ದೇವಸ್ (ಎಕ್ಯೂಐ 266).ಖಡಕ್ಪಾಡ ಕಲ್ಯಾಣ್ (ಎಕ್ಯೂಐ 256), ದರ್ಶನ ನಗರ ಹಾಗೂ ಛಾಪ್ರ (ಎಕ್ಯೂಐ 239), ಏಶ್ಯದ ಮಾಲಿನ್ಯಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಭಾರತೀಯ ನಗರಗಳಾಗಿವೆ.
ಅತ್ಯಂತ ಕಳಪೆ ವಾಯುಗುಣಮಟ್ಟದೊಂದಿಗೆ ಚೀನಾದ ಲುಝವೌ ನಗರದಲ್ಲಿರುವ ಕ್ಸಿಯಾವೊಶಿಶಾಂಗ್ ಬಂದರು (ಎಕ್ಯೂಐ 262) ಹಾಗೂ ಮಂಗೋಲಿಯದ ಉಲಾನ್ಬಾಟಾ ನಗರದಲ್ಲಿ ಬಯಾನ್ಖೊಶು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಶ್ಯದ ಇನ್ನೆರಡು ನಗರಗಳಾಗಿವೆ.ವಾಯುವಿನ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 0ಯಿಂದ 50ರವರೆಗಿದ್ದರೆ ಉತ್ತಮ, 51ರಿಂದ 100ರವರೆಗಿದ್ದದರೆ ಸಾಧಾರಣ, 101ರಿಂದ 150 ನಡುವೆ ಇದ್ದರೆ ಸಂವೇದನಕಾರಿ ಗುಂಪುಗಳಿಗೆ ಅನಾರೋಗ್ಯಕರ, 151ರಿಂದ 200ರವರೆಗಿದ್ದರೆ ಎಲ್ಲಾ ಗುಂಪುಗಳಿಗೆ ಅನಾರೋಗ್ಯಕರ , 201ರಿಂದ300ರವರೆಗಿದ್ದರೆ ಮತ್ತು 301ರಿಂದ 50ರವರೆಗಿದ್ದರೆ ಮಾನವ ಆರೋಗ್ಯಕ್ಕೆ ಅಪಾಯಕಾರಿಯೆಂದು ಪರಿಗಣಿಸಲಾಗುತ್ತದೆ.
ಜಾಗತಿಕ ಆರೋಗ್ಯ ಸೂಚ್ಯಂಕ ಯೋಜನೆಯನ್ನು 2007ರಲ್ಲಿ ಆರಂಭಿಸಲಾಗಿತ್ತು. ಪ್ರಜೆಗಳಲ್ಲಿ ವಾಯುಮಾಲಿನ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಹಾಗೂ ಏಕೀಕೃತ ಮತ್ತು ವಿಶ್ವವ್ಯಾಪಿ ವಾಯು ಗುಣಮಟ್ಟದ ಕುರಿತ ಮಾಹಿತಿಯನ್ನು ನೀಡುವ ಮೂಲಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.







