ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ; ಇಲ್ಲಿ ಯಾರೂ ಸುರಕ್ಷಿತರಲ್ಲ

ಇದು ಹಿಂದೂ-ಮುಸ್ಲಿಮ್ ವಿಷಯಕ್ಕಿಂತ ತುಂಬಾ ಹೆಚ್ಚಿನದು. ನಮ್ಮ ಸಮಾಜದಲ್ಲಿ ಕೋಮು ವ್ಯಾಧಿ ಎಷ್ಟು ಆಳಕ್ಕೆ ಇಳಿದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಪಾತಕಿಗಳ ಬಿಡುಗಡೆ ರಾಜಕೀಯ ಲಾಭ ತರುವುದಾದರೆ, ರಾಜಕಾರಣಿಗಳು ಕಾನೂನಿನ ಆಡಳಿತವನ್ನೇ ಒಡೆದು ಹಾಕುತ್ತಾರೆ ಹಾಗೂ ಪ್ರತೀ ಪ್ರಕರಣದಲ್ಲಿ ದೋಷಿಗಳು ಶಿಕ್ಷೆ ಅನುಭವಿಸಬೇಕೆಂದೇನೂ ಇಲ್ಲ ಎಂಬುದಾಗಿ ದೇಶಕ್ಕೆ ಬೋಧನೆ ಮಾಡಲು ಮುಂದಾಗುತ್ತಾರೆ.
ಯಾವುದೇ ಸಮಾಜಕ್ಕೆ ಕೊಲೆ, ಅತ್ಯಾಚಾರ ಅಥವಾ ದ್ವೇಷವನ್ನು ತಡೆಯಲು ಸಾಧ್ಯವಿಲ್ಲ. ಇದು ಸತ್ಯ. ಅತ್ಯಂತ ನೀತಿವಂತ ಸಮಾಜದಲ್ಲೂ ಕೊಲೆಗಡುಕರು, ಅತ್ಯಾಚಾರಿಗಳು ಮತ್ತು ದ್ವೇಷ ಹುಟ್ಟುಹಾಕುವವರು ಯಾವತ್ತೂ ಇರುತ್ತಾರೆ.
ಹಾಗಾದರೆ, ನಾವು ಪ್ರತೀ ದಿನ ಎಷ್ಟು ಸಾಧ್ಯವೋ ಅಷ್ಟು ಸಾಮಾನ್ಯ ಬದುಕನ್ನು ಬದುಕಲು ಹೇಗೆ ಸಾಧ್ಯ? ಯಾಕೆಂದರೆ, ನಾಗರಿಕ ಸಮಾಜಗಳಲ್ಲಿ ಕಾನೂನಿನ ಆಡಳಿತ ಇರುತ್ತದೆ ಎಂಬ ನಂಬಿಕೆ ಯಿಂದ. ಖಂಡಿತವಾಗಿಯೂ, ಅಪರಾಧಗಳು ನಡೆಯುತ್ತವೆ. ಆದರೆ, ಅಪರಾಧಿಗಳನ್ನು ಬೇಟೆಯಾಡಲಾಗುತ್ತದೆ. ಅವರು ಬಂಧನಕ್ಕೊಳಗಾದಾಗ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ. ಸೂಕ್ತ ಪ್ರಕ್ರಿಯೆಯ ಬಳಿಕ, ಪಾತಕಿಗಳ ಅಪರಾಧ ಸಾಬೀತಾದರೆ ಅವರ ಅಪರಾಧಕ್ಕೆ ಅನುಗುಣವಾಗಿ ಶಿಕ್ಷೆಯಾಗುತ್ತದೆ.
ಒಂದು ವೇಳೆ, ಯಾವುದೋ ಕಾರಣಕ್ಕಾಗಿ ನ್ಯಾಯ ಪಡೆಯುವ ನಿರೀಕ್ಷೆಗೆ ಪದೇ ಪದೇ ಪೆಟ್ಟುಬಿದ್ದರೆ, ಕೊಲೆ ಮಾಡಿಯೂ ಕೆಲವು ಪಾತಕಿ ಗಳಿಗೆ ಏನೂ ಆಗದಿದ್ದರೆ ಮತ್ತು ನ್ಯಾಯವೇ ಸಿಗದಷ್ಟು ವ್ಯವಸ್ಥೆಯು ಕುಲಗೆಟ್ಟು ಹೋದರೆ, ಆಗ ನಾಗರಿಕ ಸಮಾಜ ಎಂಬ ಸ್ಥಾನವು ಅಲುಗಾಡಲು ಆರಂಭಿಸುತ್ತದೆ. ಆಗ ಆ ಸಮಾಜದ ನಾಗರಿಕರು ಹೆದರಿಕೆಯಿಂದ ಬದುಕಲು ಆರಂಭಿಸುತ್ತಾರೆ. ಯಾಕೆಂದರೆ ಅವರಿಗೆ ಗೊತ್ತು, ಅವರಿಗೆ ಹಾನಿ ಮಾಡುವ ವ್ಯಕ್ತಿಗಳ ವಿರುದ್ಧ ವ್ಯವಸ್ಥೆಯು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು.
ಭಾರತದಲ್ಲಿ ನ್ಯಾಯ ಪಡೆಯುವ ಪ್ರಕ್ರಿಯೆಯು ನಿರಂತರ ಹೋರಾಟವಾಗಿದೆ. ಮೊದಲನೆಯದಾಗಿ, ದುರ್ಬಲರು ಮತ್ತು ಅಸಹಾಯಕರನ್ನು ಕಾಡುವವರ ಬಗ್ಗೆ ಪೊಲೀಸರು ಯಾವತ್ತೂ ತಲೆಕೆಡಿಸಿಕೊಳ್ಳುವುದಿಲ್ಲ.
ಎರಡನೆಯದಾಗಿ, ತಮ್ಮನ್ನು ಉತ್ತರದಾಯಿಯಾಗಿ ಮಾಡಲು ನಡೆಸಲಾಗುವ ಯಾವುದೇ ಪ್ರಯತ್ನಗಳನ್ನು ಹೇಗೆ ವಿಫಲಗೊಳಿಸ ಬೇಕು ಎನ್ನುವುದು ಪ್ರಭಾವಿ ಮತ್ತು ಶಕ್ತಿಶಾಲಿ (ಶ್ರೀಮಂತರು, ರಾಜಕಾರಣಿ ಗಳು ಮತ್ತು ಅವರ ಕುಟುಂಬ ಸದಸ್ಯರು ಮುಂತಾದವರು)ಗಳಿಗೆ ಚೆನ್ನಾಗಿ ಗೊತ್ತು. ಮತ್ತು ಕೊನೆಯದಾಗಿ, ಕಾನೂನು ಅನುಷ್ಠಾನ ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತದೆ ಎಂಬುದಾಗಿ ಭಾವಿಸಿದರೂ, ಸಂತ್ರಸ್ತರು ದುರ್ಬಲ ನ್ಯಾಯಾಂಗ ವ್ಯವಸ್ಥೆಯನ್ನು ಎದುರಿಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ, ಪ್ರಕರಣಗಳು ವಿಚಾರಣೆಗೆ ಬರಲು ವರ್ಷ ಗಳನ್ನೇ ತೆಗೆದುಕೊಳ್ಳುತ್ತದೆ, ವಾದಗಳನ್ನು ಸೂಕ್ಷ್ಮವಾಗಿ ಆಲಿಸಲು ನ್ಯಾಯಾಧೀಶರಿಗೆ ಸಾಕಷ್ಟು ಸಮಯವಿರುವುದಿಲ್ಲ ಹಾಗೂ ನ್ಯಾಯಾಂಗ ದ ಮೇಲೆ ಪರಿಣಾಮ ಬೀರಲು ಪ್ರಯತ್ನಗಳನ್ನು ಮಾಡಲಾಗುತ್ತದೆ.
ನಂಬಿಕೆಗೆ ಪೆಟ್ಟು
ಆದಾಗ್ಯೂ, ಈವರೆಗೆ, ಹಲವು ಸಮಸ್ಯೆಗಳು ಮತ್ತು ಕೆಲವು ಸ್ಪಷ್ಟ ನ್ಯಾಯ ನಿರಾಕರಣೆ ಪ್ರಕರಣಗಳ ಹೊರತಾಗಿಯೂ, ನಮ್ಮ ವ್ಯವಸ್ಥೆಯು ಭರವಸೆರಹಿತ ಹಂತವನ್ನು ತಲುಪಿಲ್ಲ; ಕೊಲೆಗಡುಕರು ಮತ್ತು ಅತ್ಯಾಚಾರಿಗಳು ಬಹಿರಂಗವಾಗಿ ಓಡಾಡುತ್ತಿದ್ದಾರೆ ಹಾಗೂ ಅವರನ್ನು ಭಯಾನಕ ವ್ಯಕ್ತಿಗಳು ಎಂದು ಸಮಾಜವು ಪರಿಗಣಿಸುತ್ತಿಲ್ಲ ಎಂಬುದಾಗಿ ನಾವು ಭಾವಿಸುವ ಸ್ಥಿತಿಯನ್ನು ತಲುಪಿಲ್ಲ. ಹೆಚ್ಚಿನ ಪ್ರಕರಣ ಗಳಲ್ಲಿ, ತಪ್ಪಿತಸ್ಥರನ್ನು ಹಿಡಿಯಲಾಗುತ್ತದೆ ಹಾಗೂ ಶಿಕ್ಷೆಗೆ ಗುರಿಪಡಿಸ ಲಾಗುತ್ತದೆ ಅಥವಾ ಹಾಗೆಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ.
ಕಾನೂನಿನ ಆಡಳಿತದಲ್ಲಿನ ಈ ನಂಬಿಕೆಯೇ ನಮ್ಮ ಸಮಾಜ ನಡೆಯುವಂತೆ ಮಾಡುತ್ತದೆ ಹಾಗೂ ನಾವು ಕಾನೂನಿನ ಆಡಳಿತವನ್ನು ಗೌರವಿಸುವ ದೇಶವೊಂದರಲ್ಲಿ ವಾಸಿಸುತ್ತಿದ್ದೇವೆ ಎಂದು ಭಾವಿಸಿ ನಮ್ಮ ಜೀವನವನ್ನು ಸಾಗಿಸುವ ಧೈರ್ಯವನ್ನು ನೀಡುತ್ತದೆ. ಆ ನಂಬಿಕೆ ನಾಶವಾದರೆ ನಮ್ಮ ಸಮಾಜದ ತಳಹದಿಯೇ ನಾಶವಾಗುತ್ತದೆ.
ಮಾನವೀಯತೆಯ ನಿರಾಕರಣೆ
ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ತುಂಬಾ ಬರೆಯಲಾಗಿದೆ. ಆದರೆ, ಆ ಪೈಕಿ ಹೆಚ್ಚಿನವುಗಳನ್ನು ಹಿಂದೂ-ಮುಸ್ಲಿಮ್ ದೃಷ್ಟಿಕೋನದಿಂದ ಬರೆಯಲಾಗಿದೆ. ಅದೊಂದು ಮುಖ್ಯ ಮತ್ತು ಸಮಂಜಸ ದೃಷ್ಟಿಕೋನವೇ ಹೌದು. ಆದರೆ, ವಿಷಯವು ಧಾರ್ಮಿಕ ಭಿನ್ನಾಭಿಪ್ರಾಯ ಗಳನ್ನು ಮೀರಿ ನಿಲ್ಲುತ್ತದೆ. ಅದು ಜೀವವನ್ನು ಗೌರವಿಸುವುದಕ್ಕೆ, ಮಹಿಳೆಯನ್ನು ಗೌರವಿಸುವುದಕ್ಕೆ ಸಂಬಂಧಿಸಿದೆ. ಇಂದಿನ ಭಾರತದಲ್ಲಿ ನ್ಯಾಯವನ್ನು ಪಡೆಯುವುದು ಎಷ್ಟು ಕಷ್ಟ ಎನ್ನುವುದಕ್ಕೆ ಸಂಬಂಧಿಸಿದೆ.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೂರು ವರ್ಷದ ಬಾಲಕಿಯ ತಲೆಯನ್ನು ಬಂಡೆಗೆ ಬಡಿಯಲಾಗಿದೆ. ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಆಕೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ಪಾತಕಿಗಳು ಆಕೆಯನ್ನು ಬಿಟ್ಟು ಹೋಗಿದ್ದರು.
ಅವರು ಯಾವ ಧರ್ಮಕ್ಕೆ ಸೇರಿದ್ದರು ಎನ್ನುವುದಕ್ಕೆ ನಿಜವಾಗಿಯೂ ಮಹತ್ವವಿದೆಯೇ? ಏನು ನಡೆದಿದೆಯೋ ಅದನ್ನು ಸಂಪೂರ್ಣವಾಗಿ ಮಾನವ ಮಟ್ಟದಲ್ಲಿ ನೋಡಿದಾಗ ನಿಜವಾಗಿಯೂ ಭಯಾನಕ ಕೃತ್ಯವಲ್ಲವೇ? ನ್ಯಾಯವನ್ನು ಖಾತರಿಪಡಿಸಲು ಪ್ರತಿಯೊಂದು ಧರ್ಮದ ಪ್ರತಿಯೊಬ್ಬ ವ್ಯಕ್ತಿಯು ಬಯಸಬಾರದೆ? ಬಹುಶಃ ಇಲ್ಲ.
ನಮ್ಮಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳ ಮುಸ್ಲಿಮ್ ದ್ವೇಷ ಎಷ್ಟೊಂದು ತೀವ್ರವಾಗಿದೆಯೆಂದರೆ, ಅದು ಮುಸ್ಲಿಮರಿಗೆ ಮೂಲಭೂತ ಮಾನವೀಯತೆಯನ್ನೇ ನಿರಾಕರಿಸಿಬಿಡುತ್ತದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ದೋಷಿಗಳಾಗಿರುವ ಅತ್ಯಾಚಾರಿಗಳು ಮತ್ತು ಕೊಲೆಗಡುಕರ ಬಿಡುಗಡೆಯು, ನಾರಿ ಶಕ್ತಿ ಮತ್ತು ಮಹಿಳಾ ಸುರಕ್ಷತೆ ಬಗ್ಗೆ ಪ್ರಧಾನಿಯವರು ಹೇಳಿರುವುದಕ್ಕೆಲ್ಲಾ ಹೇಗೆ ವಿರುದ್ಧವಾಗಿದೆ ಎಂಬ ಬಗ್ಗೆ ಕೆಲವು ವಾರಗಳ ಹಿಂದೆ ನಾನು ಬರೆದಿದ್ದೆ. ಈ ವ್ಯಕ್ತಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನಾನು ಬರೆದಿದ್ದೆ. ಗುಜರಾತ್ ಸರಕಾರದಲ್ಲಿರುವ ಸ್ಥಳೀಯ ಮಟ್ಟದ ಕೋಮುವಾದಿಗಳು ಇದರ ಹಿಂದಿರಬೇಕು ಎಂದು ಹೇಳಿದ್ದೆ.
ಆದರೆ, ನಾನು ಭಾವಿಸಿದ್ದು ತಪ್ಪಾಗಿದೆ.
ಕೇಂದ್ರ ಗೃಹ ಸಚಿವಾಲಯದ ಸಂಪೂರ್ಣ ಅನುಮೋದನೆ ಯೊಂದಿಗೆ ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಗುಜರಾತ್ ಸರಕಾರ ಈಗ ಬಹಿರಂಗಗೊಳಿಸಿದೆ. ಅತ್ಯಾಚಾರಿಗಳು ಮತ್ತು ಕೊಲೆಗಡುಕರ ಬಿಡುಗಡೆಗೆ ತನ್ನ ಒಪ್ಪಿಗೆಯಿದೆ ಎಂದು ಹೇಳುವ ಪತ್ರವನ್ನು ಕೇಂದ್ರ ಗೃಹ ಸಚಿವಾಲಯವು ಜುಲೈ 11ರಂದು ಗುಜರಾತ್ ಸರಕಾರಕ್ಕೆ ಬರೆದಿದೆ.
ಈ ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಅವರ ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಬಿಡುಗಡೆಗೊಳಿಸಲು ಕೊಡಲಾಗಿರುವ ಕಾರಣವೆಂದರೆ, ಅವರ ‘ಉತ್ತಮ ನಡವಳಿಕೆ’. ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. ಈ ದೋಷಿಗಳ ಪೈಕಿ ಕನಿಷ್ಠ ಇಬ್ಬರು ಪರೋಲ್‌ನಲ್ಲಿ ಸುಮಾರು 1,200 ದಿನಗಳನ್ನು ಜೈಲಿನ ಹೊರಗೆ ಕಳೆದಿದ್ದಾರೆ. ಇದು ಇತ್ತೀಚೆಗಷ್ಟೇ ಬಹಿರಂಗವಾಗಿದೆ. ಈ ಇಬ್ಬರು ಪರೋಲ್‌ನಲ್ಲಿದ್ದಾಗ, ಮಹಿಳೆಯರ ಗೌರವಕ್ಕೆ ಚ್ಯುತಿಯುಂಟು ಮಾಡಿದ್ದರು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂಬ ಆರೋಪಗಳಿವೆ. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್‌ಗಳೂ ದಾಖಲಾಗಿವೆ. ಇದು ಅಂತೆ-ಕಂತೆಯಲ್ಲ. ಅವರ ವಿರುದ್ಧದ ಎಫ್‌ಐಆರ್‌ಗಳ ಪ್ರತಿಗಳನ್ನು ‘ಮೋಜೊ’ ವೆಬ್‌ಸೈಟ್ ಪ್ರಕಟಿಸಿದೆ.
ಉತ್ತಮ ನಡವಳಿಕೆ?
ಇನ್ನೂ ಹೆಚ್ಚಿನ ಆಘಾತಕಾರಿ ವಿಷಯವೆಂದರೆ, ಅವರ ಬಿಡುಗಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸರಕಾರದ ಮಂತ್ರಿಗಳು ಹೇಳುತ್ತಿದ್ದಾರೆ. ‘‘ಇದರಲ್ಲಿ ನನಗೆ ಯವುದೇ ತಪ್ಪು ಕಾಣುವುದಿಲ್ಲ. ಇದು ಕಾನೂನಿನ ಪ್ರಕ್ರಿಯೆ’’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಇತ್ತೀಚೆಗೆ ‘ಎನ್‌ಡಿಟಿವಿ’ಗೆ ಹೇಳಿಕೆ ನೀಡಿದ್ದಾರೆ. ಜಾತ್ಯತೀತ ಗುಜರಾತ್‌ನ ಭರವಸೆ ಎಂಬುದಾಗಿ ಒಮ್ಮೆ ಪರಿಗಣಿಸಲ್ಪಟ್ಟಿದ್ದ ಹಾರ್ದಿಕ್ ಪಟೇಲ್ ಕೂಡ ಅತ್ಯಾಚಾರಿಗಳು ಮತ್ತು ಕೊಲೆಗಡುಕರ ಬಿಡುಗಡೆಯನ್ನು ಸಮರ್ಥಿಸಿದ್ದಾರೆ. ‘‘ಉತ್ತಮ ನಡತೆಗಾಗಿ ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ’’ ಎಂದು ಅವರು ಹೇಳಿದ್ದಾರೆ. ‘‘ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ತೋರಿಸಲಾಗುತ್ತಿದೆ ಎಂದು ನನಗೆ ಅನಿಸುತ್ತದೆ’’ ಎಂದಿದ್ದಾರೆ.
ನನ್ನ ಪ್ರಶ್ನೆ: ನಿರ್ಭಯಾ ಪ್ರಕರಣದ ಅತ್ಯಾಚಾರಿಗಳು ಮತ್ತು ಆರೋಪಿಗಳನ್ನು ಬಿಡುಗಡೆ ಮಾಡಿದರೆ ಈ ವ್ಯಕ್ತಿಗಳು ಹೀಗೆಯೇ ಹೇಳುವರೇ?
ಇದಕ್ಕೆ ಉತ್ತರ ನಿಮಗೆ ಗೊತ್ತಿದೆ ಎಂದು ನಾನು ಭಾವಿಸುತ್ತೇನೆ.
ಆದರೆ, ಎಲ್ಲರೂ ದ್ವೇಷ ಮತ್ತು ಮಹತ್ವಾಕಾಂಕ್ಷೆಯಿಂದ ಈ ವ್ಯಕ್ತಿಗಳಷ್ಟು ಕುರುಡರಾಗಿಲ್ಲ. ಬಿಡುಗಡೆಯನ್ನು ವಿರೋಧಿಸಿದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು ಹೀಗೆ ಬರೆದರು: ‘‘ಆರೋಪಿಗಳು ಸಂತ್ರಸ್ತರೊಂದಿಗೆ ಯಾವುದೇ ಹಗೆ ಅಥವಾ ಸಂಬಂಧವನ್ನು ಹೊಂದಿರ ಲಿಲ್ಲ. ಸಂತ್ರಸ್ತರು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕಾಗಿ ಈ ಅಪರಾಧವನ್ನು ಮಾಡಲಾಗಿದೆ. ಈ ಪ್ರಕರಣದಲ್ಲಿ, ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯನ್ನೂ ಅವರು ಬಿಟ್ಟಿಲ್ಲ. ಇದು ಅತ್ಯಂತ ಕೆಟ್ಟ ದ್ವೇಷಾಪರಾಧ ಮತ್ತು ಮಾನವತೆಯ ವಿರುದ್ಧದ ಅಪರಾಧವಾಗಿದೆ. ಈ ಅಪರಾಧದಲ್ಲಿ ನಲುಗಿದ್ದು ಇಡೀ ಸಮಾಜ’’. ಗುಜರಾತ್ ಸರಕಾರ ಮತ್ತು ಗೃಹ ಸಚಿವರು ಈ ನ್ಯಾಯಾಧೀಶರ ಅಭಿಪ್ರಾಯವನ್ನು ತಿರಸ್ಕರಿಸಿದರು.
ನ್ಯಾಯಾಧೀಶರ ಅಭಿಪ್ರಾಯ ಪರಿಪೂರ್ಣವಾಗಿದೆ. ನಾವೀಗ ಯಾವ ಹಂತಕ್ಕೆ ತಲುಪಿದ್ದೇವೆಂದರೆ, ಜನರನ್ನು ಕೋಮು ನೆಲೆಯಲ್ಲಿ ವಿಭಜಿಸುವುದಕ್ಕಾಗಿ, ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಸಾಧಿಸುವುದಕ್ಕಾಗಿ ಮತ್ತು ಮತಗಳಿಗಾಗಿ ನ್ಯಾಯ ಮತ್ತು ಕಾನೂನಿನ ಆಡಳಿತದ ಬಗ್ಗೆ ಸಮಾಜ ಹೊಂದಿರುವ ನಿರೀಕ್ಷೆಗಳನ್ನು ಧಿಕ್ಕರಿಸಲು ರಾಜಕಾರಣಿಗಳು ಸಿದ್ಧರಾಗಿದ್ದಾರೆ. ನ್ಯಾಯಾಧೀಶರು ಹೇಳಿರುವಂತೆ, ನಾವು, ಭಾರತೀಯ ಜನತೆ, ನಲುಗಿದ್ದೇವೆ. ಇಂಥ ಅಪರಾಧಗಳಿಂದ ಹಾನಿಗೊಳಗಾಗಿರುವುದು ನಮ್ಮ ಇಡೀ ಸಮಾಜ. ನಮ್ಮ ರಾಜಕಾರಣಿಗಳಲ್ಲಿ ಕನಿಷ್ಠ ಪ್ರಮಾಣದ ಮಾನವೀಯತೆಯೂ ಇಲ್ಲದಿರುವ ಕಾರಣಕ್ಕಾಗಿ ನಮ್ಮ ಸಮಾಜ ಜರ್ಜರಿತಗೊಂಡಿದೆ.
ಮುಂದೆ ಏನು ಬರಲಿದೆ ಎನ್ನುವುದು ನಮಗೆ ಗೊತ್ತಿದೆ. ಈ ಅತ್ಯಾಚಾರಿಗಳು ಮತ್ತು ಕೊಲೆಗಡುಕರ ಬಿಡುಗಡೆಯನ್ನು ನ್ಯಾಯಾಲಯಗಳು ರದ್ದುಪಡಿಸಿದರೂ ಏನೂ ಆಗುವುದಿಲ್ಲ. ಅವರು ಈಗಾಗಲೇ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಗುಜರಾತ್ ಸರಕಾರ ಹೇಳುತ್ತದೆ.
ಹಿಂದೂ-ಮುಸ್ಲಿಮ್ ವಿಷಯಗಳಲ್ಲಿ ಜನರು ಭಿನ್ನಾಭಿಪ್ರಾಯ ಗಳನ್ನು ಹೊಂದುವುದು ಸಾಧ್ಯವಿದೆ. ಆದರೆ, ಬಿಲ್ಕಿಸ್ ಬಾನು ಅವರ ಅತ್ಯಾಚಾರಿಗಳು ಮತ್ತು ಅವರ ಮೂರು ವರ್ಷದ ಮಗಳ ಕೊಲೆಗಡುಕರ ಬಿಡುಗಡೆಯನ್ನು ಇನ್ನೊಂದು ಹಿಂದೂ-ಮುಸ್ಲಿಮ್ ವಿಷಯ ಅಷ್ಟೆ ಎಂಬುದಾಗಿ ನಾವು ಪರಿಗಣಿಸಿದರೆ ಅದು ನಮಗೆ ನಾವೇ ಮಾಡಿಕೊಳ್ಳುವ ಅವಮಾನವಾಗಿರುತ್ತದೆ.
ಇದು ಹಿಂದೂ-ಮುಸ್ಲಿಮ್ ವಿಷಯಕ್ಕಿಂತ ತುಂಬಾ ಹೆಚ್ಚಿನದು. ನಮ್ಮ ಸಮಾಜದಲ್ಲಿ ಕೋಮು ವ್ಯಾಧಿ ಎಷ್ಟು ಆಳಕ್ಕೆ ಇಳಿದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಪಾತಕಿಗಳ ಬಿಡುಗಡೆ ರಾಜಕೀಯ ಲಾಭ ತರುವುದಾದರೆ, ರಾಜಕಾರಣಿಗಳು ಕಾನೂನಿನ ಆಡಳಿತವನ್ನೇ ಒಡೆದು ಹಾಕುತ್ತಾರೆ ಹಾಗೂ ಪ್ರತೀ ಪ್ರಕರಣದಲ್ಲಿ ದೋಷಿಗಳು ಶಿಕ್ಷೆ ಅನುಭವಿಸಬೇಕೆಂದೇನೂ ಇಲ್ಲ ಎಂಬುದಾಗಿ ದೇಶಕ್ಕೆ ಬೋಧನೆ ಮಾಡಲು ಮುಂದಾಗುತ್ತಾರೆ.
ಇಂಥ ಬೆಳವಣಿಗೆಗಳು ಭವಿಷ್ಯದ ಬಗ್ಗೆ ನಾವು ಬೆಚ್ಚಿ ಬೀಳುವಂತೆ ಮಾಡುತ್ತವೆ. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹಾನಿಗೊಳಿಸಿ ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ. ಇನ್ನು, ಕಾನೂನಿನ ಆಡಳಿತವನ್ನು ರಾಜಕಾರಣಿ ಗಳು ಬಹಿರಂಗವಾಗಿಯೇ ಧಿಕ್ಕರಿಸುವಾಗ, ಹಿಂದೂ, ಮುಸ್ಲಿಮ್ ಅಥವಾ ಯಾರೇ ಆದರೂ ಸುರಕ್ಷಿತರಲ್ಲ. ಇಲ್ಲಿ ನಷ್ಟವಾಗುವುದು ಭಾರತಕ್ಕೆ.
ಕೃಪೆ: ThePrint







