ಜಾರ್ಖಂಡ್: ಸಾಫ್ಟ್ವೇರ್ ಇಂಜಿನಿಯರ್ ಮೇಲೆ ಅತ್ಯಾಚಾರ ಪ್ರಕರಣ, ಇಬ್ಬರು ಅಪ್ರಾಪ್ತರು ಸೇರಿ ಏಳು ಮಂದಿ ಬಂಧನ

Photo:PTI
ರಾಂಚಿ: ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಅಕ್ಟೋಬರ್ 20 ರಂದು 26 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಏಳು ಜನರನ್ನು ರವಿವಾರ ಬಂಧಿಸಲಾಗಿದೆ ಎಂದು PTI ವರದಿ ಮಾಡಿದೆ.
ಐವರನ್ನು ಶಿವಶಂಕರ್ ಕರ್ಜಿ (22), ಸುರೇನ್ ದೇವಗನ್ (20), ಪೂರ್ಣಿ ದೇವಗನ್ (19), ಪ್ರಕಾಶ್ ದೇವಗನ್ (21) ಮತ್ತು ಸಿಮಾ ಸಿಂಕು (19) ಎಂದು ಗುರುತಿಸಲಾಗಿದೆ ಎಂದು Hindustan Times ವರದಿ ಮಾಡಿದೆ.
ಇವರೆಲ್ಲರೂ ಘಟನೆ ನಡೆದ ಓಲ್ಡ್ ಚೈಬಾಸಾ ಏರೋಡ್ರೋಮ್ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು. ಪ್ರಕರಣದ ಇಬ್ಬರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಅಕ್ಟೋಬರ್ 12 ರಂದು, ವಿಶೇಷ ತನಿಖಾ ತಂಡವು ಸ್ಥಳೀಯ ನಿವಾಸಿಗಳ ಮಾಹಿತಿ ಆಧಾರದ ಮೇಲೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ 12 ಜನರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದರು.
"ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತನಿಖೆಯ ಪ್ರಕಾರ, ಒಂಬತ್ತು ಜನರು ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನೂ ಗುರುತಿಸಲಾಗಿದೆ. ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ’’ ಎಂದು ಪಶ್ಚಿಮ ಸಿಂಗ್ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಹೇಳಿದ್ದಾರೆ.







