ಮಹಿಳಾ ಅಪ್ರೆಂಟೀಸ್ ತರಬೇತಿ ಕೈ ಬಿಟ್ಟ ಸರಕಾರ; ಎಸ್ಟಿ ಅಭ್ಯರ್ಥಿಗಳ ತರಬೇತಿ ಅರ್ಧಕ್ಕೆ ಸ್ಥಗಿತ

photo credit- dipr.karnataka.gov.in/
ಬೆಂಗಳೂರು, ಅ.24: ಪ್ರತಿವರ್ಷ ಪತ್ರಿಕೋದ್ಯಮದಲ್ಲಿ ಪದವಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ವೃತ್ತಿ ಕುರಿತು ತರಬೇತಿ ನೀಡಲಾಗುತ್ತಿತ್ತು. ಆದರೆ, 2022ನೇ ಸಾಲಿನ ಮಹಿಳೆಯರಿಗೆ ನೀಡುವ ಈ ಯೋಜನೆಯನ್ನು ಬಿಜೆಪಿ ಸರಕಾರ ನಿಲ್ಲಿಸಿದೆ. ಅಲ್ಲದೆ ಕೋವಿಡ್ ನೆಪವೊಡ್ಡಿ ಹಿಂದಿನ ವರ್ಷ ಅಂದರೆ 2020-21ನೇ ಸಾಲಿನಲ್ಲಿ ತರಬೇತಿಯನ್ನು ಒಂದು ತಿಂಗಳು ಮೊಟಕುಗೊಳಿಸಿತ್ತು.
ಇಲಾಖೆಯಲ್ಲಿ ಪತ್ರಿಕೋದ್ಯಮ ಪದವಿ ಪಡೆದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅಪ್ರೆಂಟೀಸ್ ತರಬೇತಿಯನ್ನು ನೀಡಲಾಗುತ್ತಿತ್ತು. ಈ ವರ್ಷ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳನ್ನು ಮಾತ್ರ ತರಬೇತಿಗೆ ಆಯ್ಕೆ ಮಾಡಿಕೊಂಡು, ಮಹಿಳಾ ಅಭ್ಯರ್ಥಿಗಳನ್ನು ಕೈಬಿಟ್ಟಿರುವುದು ಬಹಿರಂಗವಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಅರ್ಜಿ ಆಹ್ವಾನಿಸಿ, ಅಪ್ರೆಂಟೀಸ್ ತರಬೇತಿಗಾಗಿ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು 10 ತಿಂಗಳ ಕಾಲ ವಾರ್ತಾ ಇಲಾಖೆಯ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಯೋಜನೆಯಡಿ ಜಿಲ್ಲೆಗೆ ಇಬ್ಬರು ಮಹಿಳಾ ಅಭ್ಯರ್ಥಿಗಳಂತೆ ಒಟ್ಟು 60 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಹಿಂದಿನ ವರ್ಷದಲ್ಲಿ 10 ತಿಂಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು 9 ತಿಂಗಳಿಗೆ ಮೊಟಕುಗೊಳಿಸಲಾಗಿತ್ತು. ಆದರೆ, ಈ ವರ್ಷ ಅನುದಾನ ಕೊರತೆ ನೆಪವೊಡ್ಡಿ ರಾಜ್ಯ ಸರಕಾರವು ಯೋಜನೆಯನ್ನೇ ಕೈಬಿಟ್ಟಿದೆ.
ಅಪ್ರೆಂಟೀಸ್ ತರಬೇತಿ ಪಡೆಯುತ್ತಿರುವವರಿಗೆ ಪ್ರಶಿಕ್ಷಣ ವೇತನವನ್ನು ಮಾಸಿಕ 15ಸಾವಿರ ರೂ. ಪಾವತಿ ಮಾಡಲು ಮಾಧ್ಯಮ ಅಕಾಡಮಿಯಲ್ಲಿ ಹಣವನ್ನು ಠೇವಣಿ ಇಡಲಾಗುತ್ತಿತ್ತು. ಆದರೆ, ಈ ವರ್ಷ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲು ಯಾವುದೇ ಹಣವನ್ನು ಠೇವಣಿ ಇಡದ ಕಾರಣ ಯೋಜನೆಯನ್ನು ಕೈಬಿಡ ಲಾಗಿದೆ. ಹಾಗೆಯೇ ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಗಳು ಮಾಸಿಕ ಹಣವನ್ನು ಕಡಿತ ಮಾಡಿರುವುದು ಹಾಗೂ 2019ನೇ ಸಾಲಿನಲ್ಲಿ ಹೆಚ್ಚು ವರಿಯಾಗಿ ಒಬ್ಬ ಅಭ್ಯರ್ಥಿಗೆ 12 ತಿಂಗಳ ಮಾಸಿಕ ಹಣ ಮಂಜೂರು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ
ಎಸ್ಟಿ ಅಭ್ಯರ್ಥಿಗಳನ್ನು ಅರ್ಧಕ್ಕೆ ಕೈಬಿಟ್ಟ ಸರಕಾರ: ಕೋವಿಡ್ ಎರಡನೆಯ ಅಲೆಯಲ್ಲಿ ಇಲಾಖೆಯ ಕಚೇರಿ ತೆರೆಯದಿದ್ದರೂ, ತರಬೇತಿಗೆ ಗೈರು ಹಾಜರಾಗಿದ್ದಾರೆಂದು ನೆಪವೊಡ್ಡಿ ಅಧಿಕಾರಿಗಳು 2020-21ನೇ ಸಾಲಿನಲ್ಲಿ ತರಬೇತಿ ಪಡೆಯುತ್ತಿದ್ದ ಎಸ್ಟಿ ಅಭ್ಯರ್ಥಿಗಳನ್ನು ತರಬೇತಿಯಿಂದ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಎರಡು ತಿಂಗಳು ತರಬೇತಿಗೆ ಗೈರಾಗಿದ್ದ ಇತರ ಅಭ್ಯರ್ಥಿಗಳಿಗೆ ತರಬೇತಿ ಮುಂದುವರಿಸಿರುವುದು ಎಂದು ಆರ್ಟಿಐನಡಿಯಲ್ಲಿ ಬಹಿರಂಗವಾಗಿದೆ.
ಬೆಂಗಳೂರು ನಗರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡದೆ, ನೇರವಾಗಿ ಟರ್ಮಿನೇಷನ್ ಲೆಟರ್(ಕೈಬಿಡುವ ಪತ್ರ) ನೀಡಲಾಗಿದೆ. ಈ ಮೂಲಕ ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇಲಾಖೆಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಾಗೆಯೇ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಇದ್ದರೂ, ಅಭ್ಯರ್ಥಿಗಳು ಇಲ್ಲ ಎಂದು ಅಧಿಕಾರಿಗಳು ತರಬೇತಿಗೆ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
-----------------------------------------------------------
ಪ್ರತಿವರ್ಷ ರಾಜ್ಯ ಸರಕಾರವು ಮಹಿಳಾ ಅಪ್ರೆಂಟೀಸ್ ಯೋಜನೆಗೆ ಹಣವನ್ನು ಬಿಡುಗಡೆ ಮಾಡುತ್ತಿತ್ತು. ಅದನ್ನು ಮಾಧ್ಯಮ ಅಕಾಡಮಿಯ ಖಾತೆಯಲ್ಲಿ ಠೇವಣಿ ಇಡಲಾಗುತ್ತಿತ್ತು. ಈ ವರ್ಷ ಸರಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಿಲ್ಲ.
-ಡಿ.ಪಿ.ಮುರಳೀಧರ್, ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ
------------------------------------------------------------
ಪತ್ರಿಕೋದ್ಯಮದಲ್ಲಿ ಪದವಿಯನ್ನು ಮುಗಿಸಿದ ಮಹಿಳಾ ಅಭ್ಯರ್ಥಿಗಳಿಗೆ ವೃತ್ತಿ ತರಬೇತಿಯನ್ನು ನೀಡುವ ಯೋಜನೆಯನ್ನು ಸರಕಾರ ನಿಲ್ಲಿಸಿರುವುದು ಸರಿಯಲ್ಲ. ಪದವಿ ಬಳಿಕ ವೃತ್ತಿ ನೈಪುಣ್ಯತೆಯ ಕೊರತೆಯಿಂದ ಕೆಲಸ ಸಿಗುವುದಿಲ್ಲ. ಹಾಗಾಗಿ ರಾಜ್ಯ ಸರಕಾರವು ಮಹಿಳಾ ಅಪ್ರೆಂಟೀಸ್ ತರಬೇತಿ ಯೋಜನೆಯನ್ನು ಕೈಬಿಡಬಾರದು.
-ರಶ್ಮಿ, ಪತ್ರಿಕೋದ್ಯಮ ಪದವಿ ಪಡೆದ ಅಭ್ಯರ್ಥಿ
-------------------------------------------------
ಕೋಲಾರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಪ್ರಚಾರದ ಕೊರತೆಯಿಂದಾಗಿ ಕಳೆದ ವರ್ಷ ಇಬ್ಬರು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಪೈಕಿ ಒಬ್ಬರೂ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. 2021-22ನೇ ವರ್ಷದಲ್ಲಿ ಎಸ್ಟಿ ಅಭ್ಯರ್ಥಿಯೊಬ್ಬರನ್ನು ತರಬೇತಿಗೆ ನೇಮಕ ಮಾಡಿಕೊಳ್ಳುವಂತೆ ಆಯುಕ್ತರು ತಿಳಿಸಿದ್ದರೂ, ಅಭ್ಯರ್ಥಿಗಳಿದ್ದರೂ ಕೊನೆಯ ದಿನದ ನೆಪವೊಡ್ಡಿ, ಅರ್ಜಿ ಪಡೆದುಕೊಳ್ಳಲಿಲ್ಲ. ಕೋಲಾರ ಜಿಲ್ಲೆಯಲ್ಲಿ ಯೋಜನೆಗೆ ಪ್ರಚಾರದ ಕೊರತೆ ಇದೆ.
-ಸುಬ್ರಮಣಿ, ಕೋಲಾರ ಜಿಲ್ಲೆಯ ಪತ್ರಿಕೋದ್ಯಮ ಅಭ್ಯರ್ಥಿ
-------------------------------------------------------
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಆದರೆ, ಈ ಯೋಜನೆಗಳಲ್ಲಿ ಅನ್ಯಾಯಗಳು ನಡೆಯುತ್ತಿವೆ. ಎಸ್ಟಿಗೆ ಮೀಸಲಿಟ್ಟ ಹಣವನ್ನು ಕೊಳ್ಳೆ ಹೊಡೆಯಲು ಅಭ್ಯರ್ಥಿಗಳನ್ನು ಅರ್ಧಕ್ಕೆ ತೆಗೆಯಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದಿದೆ. ಸರಕಾರವು ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
-ಬಿ.ವಿ.ಬಸವರಾಜ ನಾಯಕ, ವಾಲ್ಮೀಕಿ ನಾಯಕ ಪರಿಷತ್ನ ರಾಜ್ಯಾಧ್ಯಕ್ಷ







