ಆಕಾಶದಲ್ಲಿ ಗ್ರಹಣಗಳೆಂಬ ಪ್ರಕೃತಿಯ ನೆರಳು ಬೆಳಕಿನ ಆಟ

ಉಡುಪಿ: ಕರ್ನಾಟಕ ಕರಾವಳಿಯ ಪಶ್ಚಿಮದ ಅರಬೀ ಸಮುದ್ರದಲ್ಲಿ ನಾಳಿನ ಸೂರ್ಯಾಸ್ತ ಎಂದಿನಂತಿರುವುದಿಲ್ಲ. ಸೂರ್ಯಾಸ್ತದ ಸಮಯ ಭೂಮಿಯ ವಾತಾವರಣ ಸೂರ್ಯನ ಎಲ್ಲಾ ಬಣ್ಣಗಳನ್ನೂ ಚದುರಿಸಿ ಬರೇ ಕೆಂಬಣ್ಣದ ರಂಗಿನಿಂದ ಮಾತ್ರ ಕಂಗೊಳಿಸುವುದಿಲ್ಲ. ನಾಳೆ (ಅ.25) ಈ ಸಮಯದಲ್ಲೊಂದು ವಿಶೇಷವಿದೆ. ಅದು ಸೂರ್ಯನ ಪಾರ್ಶ್ವಗ್ರಹಣ.
ನಾಳೆ ಸೂರ್ಯನ ಕೆಂಬಣ್ಣದಲ್ಲೊಂದು ಸೊಗಸಿದೆ.. ಸೊಬಗಿದೆ. ಅದೇ ಗ್ರಹಣ. ಹಾಗಾಗಿಯೇ ಈ ಗ್ರಹಣ ಬಲು ಅಪರೂಪ. ಸೂರ್ಯ ಮತ್ತು ಭೂಮಿಯ ನಡುವೆ ಬರುವ ಚಂದ್ರ, ಆತನ ಒಂದು ಪಾರ್ಶ್ವದ ಬೆಳಕಿಗೆ ತಡೆಯೊಡ್ಡಿ ಬಿಡುತ್ತಾನೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಪ್ರತೀ ಆರು ತಿಂಗಳಿಗೊಮ್ಮೆ ಆಕಾಶದಲ್ಲಿ ನಡೆಯುತ್ತಿರುತ್ತದೆ.
ಸೂರ್ಯ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ದೀರ್ಘ ವೃತ್ತಾಕಾರವಾಗಿ ಸುತ್ತುತ್ತಿರುತ್ತವೆ. ಇವುಗಳ ಸಮತಲಗಳು ಸಂಧಿಸುವ ಎರಡು ಬಿಂದುಗಳಲ್ಲಿ ಸೂರ್ಯ ಭೂಮಿ ಹಾಗೂ ಚಂದ್ರ ನೇರ ಬರುವ ಸಾಧ್ಯತೆ ಇರುತ್ತದೆ. ಆಗ ಸೂರ್ಯ ಚಂದ್ರರ ನಡುವೆ ಭೂಮಿ ಬಂದರೆ ಸೂರ್ಯನ ಬೆಳಕು ಚಂದ್ರ ಮೇಲೆ ಬೀಳದಂತೆ ಭೂಮಿ ತಡೆಯುತ್ತದೆ. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದೇ ಚಂದ್ರಗ್ರಹಣ. ಅದೇ ಸೂರ್ಯ ಭೂಮಿಗಳ ನಡುವೆ ಚಂದ್ರ ಬಂದರೆ ಸೂರ್ಯನ ಬೆಳಕನ್ನು ಚಂದ್ರ ತಡೆಯುತ್ತದೆ ಅದೇ ಸೂರ್ಯಗ್ರಹಣ.
ಕ್ರಿ.ಶ.500ರಲ್ಲೇ ಭಾರತದ ಪ್ರಖ್ಯಾತ ಖಗೋಳ ಶಾಸ್ತ್ರಜ್ಞ ಆರ್ಯ ಭಟ, ಈ ಗ್ರಹಣ ನೆರಳು-ಬೆಳಕಿನ ಆಟವೆಂದು ಸ್ಪಷ್ಟ ವಿವರಣೆ ಕೊಟ್ಟಿದ್ದಾನೆ.
ನಾಳೆ ಮಲ್ಪೆ ಸಮುದ್ರ ಕಿನಾರೆಯಲ್ಲಿ (ಅ.25ಕ್ಕೆ) ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನೂರಾರು ಗ್ರಹಣ ವೀಕ್ಷಣಾ ಕನ್ನಡಕಗಳೊಂದಿಗೆ ಹಲವು ಬಗೆಯ ದೃಶ್ಯಮಾಧ್ಯಮಗಳ ಮೂಲಕ ಪೂರ್ಣಪ್ರಜ್ಞ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಅಣಿಯಾಗಿದೆ. ಬರೀ ಕಣ್ಣಿನಿಂದ ನೇರ ಸೂರ್ಯಗ್ರಹಣ ನೋಡಬಾರದು. ಆದರೂ ಸಾರ್ವಜನಿಕರು ಅಪರೂಪದ ಅಪೂರ್ವ ಘಟನೆಯನ್ನು ನೋಡಿ ಖುಷಿ ಪಡಲಿ ಎಂಬ ಉದ್ದೇಶದಿಂದ ಪೂರ್ಣಪ್ರಜ್ಞ ಕಾಲೇಜಿನ ಹವ್ಯಾಸಿ ಖಗೋಳ ಸಂಘ ಸಕಲ ಸಿಧ್ದತೆಗಳನ್ನು ಮಾಡಿಕೊಂಡಿದೆ.
ಅನಂತ ಆಕಾಶದಲ್ಲಿ ನಡೆಯುವ ಖಗೋಲ ವಿಸ್ಮಯಗಳಲ್ಲಿ ಸೂರ್ಯ ಗ್ರಹಣವೂ ಒಂದು. ನಮ್ಮಿಂದ ಸುಮಾರು 15 ಕೋಟಿ ಕಿಮೀ ದೂರದಲ್ಲಿರುವ ಸೂರ್ಯ ಹಾಗೂ ಬರೇ ೩ ಕೋಟಿ ೮೪ ಲಕ್ಷ ಕಿಮೀ ದೂರದಲ್ಲಿರುವ ಚಂದ್ರ ನಮಗೆ ನೇರ ಬಂದು ಆಡುವ ಆಟವಿದು. ಇದನ್ನು ಎಲ್ಲರೂ ನೋಡಿ ಆನಂದಿಸಬೇಕಾಗಿದೆ.
ಆಶ್ಚರ್ಯವೆಂದರೆ ಇಂದು ಸೂರ್ಯಾಸ್ತವಾಗುವಾಗ ಸುಮಾರು ಶೇ.20ರಷ್ಟು ಪಾರ್ಶ್ವಗ್ರಹಣದ ಸೂರ್ಯ ಮುಳುಗುವುದು. ಇದೇ ಬರುವ ನ.8ರಂದು ಹುಣ್ಣಿಮೆ ದಿನ ಚಂದ್ರ ಅಷ್ಟೇ ಪ್ರಮಾಣದ ಚಂದ್ರಗ್ರಹಣದೊಂದಿಗೆ ಉದಯಿಸಲಿದ್ದಾನೆ. ಇದೊಂದು ಆಶ್ಚರ್ಯಕರ ಕಾಕತಾಳೀಯ ಎನ್ನಬಹುದು.
ಪ್ರಕೃತಿಯ ಈ ಆಟಗಳನ್ನು ನಾವು ಬರೇ ವೀಕ್ಷಕರಾಗಿ ನೋಡಬಹುದಲ್ಲ. ಆದುದರಿಂದ ಖಗೋಳಾಸಕ್ತರು ನಾಳಿನ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.
ಮಂಗಳವಾರ ಸಂಜೆ ಪ್ರಾರಂಭಗೊಳ್ಳುವ ಸೂರ್ಯಗ್ರಹಣ ವಿವಿಧ ಪ್ರಮಾಣದಲ್ಲಿ ಕಂಡುಬರುವ ವಿಶ್ವದ ಪಥ. ಭಾರತೀಯ ಕಾಲಮಾನದಂತೆ ಸಂಜೆ 4.58ಕ್ಕೆ ಪ್ರಾರಂಭಗೊಳ್ಳುವ ಗ್ರಹಣ 6.31ಕ್ಕೆ ಕೊನೆಗೊಳ್ಳಲಿದೆ.
ಕರ್ನಾಟಕ ಕರಾವಳಿ ಭಾಗದಲ್ಲಿ ಮಂಗಳವಾರ ಕಂಡುಬರುವ ಪಾರ್ಶ್ವ ಸೂರ್ಯಗ್ರಹಣ ಕಲಾವಿದನ ಕಲ್ಪನೆಯಲ್ಲಿ. ಶೇ.20ರಷ್ಟು ಗ್ರಹಣದೊಂದಿಗೆ ಸೂರ್ಯ 6.06ಕ್ಕೆ ಅಸ್ತಮಿಸಲಿದ್ದಾನೆ. ಇದೊಂದು ಅಪರೂಪದ ಅಪೂರ್ವ ದೃಶ್ಯಕಾವ್ಯವೆನಿಸಲಿದೆ. ಉಡುಪಿ ಮಲ್ಪೆಯ ಸಮುದ್ರ ತೀರದಲ್ಲಿ ಸೂರ್ಯಗ್ರಹಣದ ಸುರಕ್ಷಿತ ವೀಕ್ಷಣೆಗೆ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು (ಪಿಎಎಸಿ) ಪ್ರತಿ ಗ್ರಹಣದ ಸಮಯದಂತೆ ಈ ಬಾರಿಯ ಗ್ರಹಣವನ್ನು ಕೂಡ ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಸಂಜೆ 5ರಿಂದ ವ್ಯವಸ್ಥೆಕೈಗೊಂಡಿದೆ.








