ಯುದ್ಧ ನಮ್ಮ ಮೊದಲ ಆಯ್ಕೆ ಅಲ್ಲ: ಕಾರ್ಗಿಲ್ನಲ್ಲಿ ದೀಪಾವಳಿ ಆಚರಿಸಿ ಪ್ರಧಾನಿ ಹೇಳಿಕೆ

Photo: Twitter(@narendramodi)
ಕಾರ್ಗಿಲ್, ಅ. 24: ಭಾರತ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆಯಾಗಿ ನೋಡುತ್ತದೆ. ಆದರೆ, ದೇಶದ ಮೇಲೆ ವಕ್ರ ದೃಷ್ಟಿ ಬೀರುವ ಯಾರಿಗೇ ಆದರೂ ತಕ್ಕ ಉತ್ತರ ನೀಡಲು ಶಸಸ್ತ್ರ ಪಡೆಗಳು ಸಶಕ್ತ ಹಾಗೂ ವ್ಯೂಹಾತ್ಮಕವಾಗಿ ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಇಲ್ಲಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 1999ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ಭಾರತೀಯ ಸೇನೆಯು ಭಯೋತ್ಪಾದನೆಯ ಹುನ್ನಾರವನ್ನು ಹತ್ತಿಕ್ಕಿದ ಬಳಿಕ ಈ ಮುಂಚೂಣಿ ವಲಯಕ್ಕೆ ಭೇಟಿ ನೀಡಿರುವುದನ್ನು ನೆನಪಿಸಿಕೊಂಡರು.
‘‘ಕಾರ್ಗಿಲ್ ಮಹತ್ವದ ನೆಲ. ಈ ನೆಲಕ್ಕಾಗಿ ಪಾಕಿಸ್ತಾನ ಹೋರಾಡುತ್ತಲೇ ಬಂದಿದೆ. ಆದರೆ, ಇಲ್ಲಿ ಅವರಿಗೆ ಧ್ವಜ ಹಾರಿಸಲು ಸಾಧ್ಯವಾಗಿಲ್ಲ. ದೀಪಾವಳಿ ಭಯವನ್ನು ಕಳೆಯುವ ಸಂಕೇತ’’ ಎಂದು ಅವರು ಹೇಳಿದರು.
‘‘ನಾನು ಕಾರ್ಗಿಲ್ ಯುದ್ಧವನ್ನು ಹತ್ತಿರದಿಂದ ನೋಡಿದ್ದೇನೆ. ಕಾರ್ಗಿಲ್ಗೆ ವಾಪಸಾಗುವುದು ನನ್ನ ಕರ್ತವ್ಯವಾಗಿತ್ತು. ಸುತ್ತಮುತ್ತ ವಿಜಯದ ಧ್ವನಿ ಪ್ರತಿಧ್ವನಿಸಿದ ಆ ಕಾಲದ ಹಲವಾರು ನೆನಪುಗಳಿವೆ’’ ಎಂದು ಅವರು ಹೇಳಿದರು.
ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವ, ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಶಸಸ್ತ್ರ ಪಡೆಗಳಲ್ಲಿ ಸುಧಾರಣೆಯನ್ನು ತರಲು ಸರಕಾರ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಶಸಸ್ತ್ರ ಪಡೆಗಳಿಗೆ ಮಹಿಳೆಯ ನಿಯೋಜನೆ ನಮ್ಮ ಬಲವನ್ನು ಹೆಚ್ಚಸಲಿದೆ. ದಶಕಗಳ ಹಿಂದೆ ಅಗತ್ಯವಾಗಿದ್ದ ಸುಧಾರಣೆಯನ್ನು ಶಸಸ್ತ್ರ ಪಡೆಗಳಲ್ಲಿ ಈಗ ಅಸ್ತಿತ್ವಕ್ಕೆ ತರಲಾಗಿದೆ ಎಂದು ಅವರು ಹೇಳಿದರು.
ಭಾರತ ತನ್ನ ಸೇನಾ ಪಡೆಯನ್ನು ಬಳಸಿ ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ನಿಯಂತ್ರಿಸುತ್ತಿದೆ. ದೇಶದ ಒಳಗೆ ಭಯೋತ್ಪಾದನೆ, ನಕ್ಸಲ್ವಾದ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಭದ್ರತೆಗೆ ‘ಆತ್ಮ ನಿರ್ಭರತೆ’ ತುಂಬಾ ಮುಖ್ಯವಾದುದು. ವಿದೇಶಿ ಶಸ್ತ್ರಾಸ್ತ್ರಗಳು ಹಾಗೂ ವ್ಯವಸ್ಥೆಗಳಿಗೆ ದೇಶದ ಅವಲಂಬನೆ ಕನಿಷ್ಠವಾಗಬೇಕು ಎಂದು ಅವರು ಹೇಳಿದರು.
ಕಾರ್ಗಿಲ್ನಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಪ್ರಧಾನಿ ಅವರು ಸಶಸ್ತ್ರ ಪಡೆಗಳ ಯೋಧರೊಂದಿಗೆ ‘ವಂದೇ ಮಾತರಂ’ ಹಾಗೂ ‘ಭಾರತ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಅನಂತರ ಅವರೊಂದಿಗೆ ‘ವಂದೇ ಮಾತರಂ’ ಗಾಯನದಲ್ಲಿ ಪಾಲ್ಗೊಂಡರು.







