ಜಾರ್ಖಂಡ್: ಯುವತಿಯ ಅತ್ಯಾಚಾರ ಪ್ರಕರಣ; ಇಬ್ಬರು ಅಪ್ರಾಪ್ತರ ಸಹಿತ 7 ಮಂದಿಯ ಬಂಧನ

ರಾಂಚಿ, ಅ. 24: ಜಾರ್ಖಂಡ್‌ನ ಪಶ್ಚಿಮ ಸಿಂಘ್‌ಭೂಮ್ ಜಿಲ್ಲೆಯಲ್ಲಿ ಅಕ್ಟೋಬರ್ 20ರಂದು 26ರ ಹರೆಯದ ಸಾಫ್ಟ್ವೇರ್ ಎಂಜಿಯರ್ ಯುವತಿಯನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ 7 ಮಂದಿಯನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಐವರನ್ನು ಶಿವಶಂಕರ್ ಕಾರ್ಜಿ (22), ಸುರೇನ್ ದೇವಗನ್ (20), ಪುರ್ನಿ ದೇವಗನ್ (19), ಪ್ರಕಾಶ್ ದೇವಗನ್ (21), ಸಿಮಾ ಸಿಂಕು (19) ಎಂದು ಗುರುತಿಸಲಾಗಿದೆ. ಎಲ್ಲರೂ ಘಟನೆ ನಡೆದ ಹಳೆ ಚೈಬಾಸಾ ವಾಯು ನೆಲೆಯ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು.
ಆರೋಪಿಗಳು ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ತನಿಖೆಯ ಪ್ರಕಾರ ಈ ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಕೂಡ ಗುರುತಿಸಲಾಗಿದೆ. ದಾಳಿ ಮುಂದುವರಿದಿದೆ ಎಂದು ಪಶ್ಚಿಮ ಸಿಂಘ್‌ಭೂಮ್‌ನ ಪೊಲೀಸ್ ಅಧೀಕ್ಷಕ ಅಷುತೋಶ್ ಶೇಖರ್ ಅವರು ಹೇಳಿದ್ದಾರೆ.
ಆರೋಪಿಗಳು ಅಕ್ಟೋಬರ್ 20ರಂದು ಸಂಜೆ ಚೈಬಾಸಾದ ವಾಯು ನೆಲೆಯ ಸಮೀಪ ಯುವತಿ ಹಾಗೂ ಆಕೆಯ ಗೆಳೆಯನನ್ನು ತಡೆದಿದ್ದರು. ಯುವತಿಯ ಗೆಳೆಯನಿಗೆ ಥಳಿಸಿದ್ದರು. ಅಲ್ಲದೆ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು.







