ಸಮೀಕ್ಷಾ ಸಂಸ್ಥೆಗಳನ್ನು ಅಲ್ಲಗಳೆಯುವ ಬದಲು ಸರಕಾರವು ಹಸಿವಿನ ಸಮಸ್ಯೆಯನ್ನು ಬಗೆಹರಿಸಬೇಕು: ಖರ್ಗೆ

ಹೊಸದಿಲ್ಲಿ,ಅ.24: ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತವು ಕೆಳಸ್ಥಾನಕ್ಕೆ ಕುಸಿದಿರುವ ಬಗ್ಗೆ ಸೋಮವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನ ನೂತನ ಅಧ್ಯಕ್ಷ ಮಲ್ಲಿಕಾರ್ಜುಕ ಖರ್ಗೆ(Mallikarjuka Kharge)ಯವರು,ಸೂಚ್ಯಂಕ ಪ್ರಕಟಿಸಿರುವ ಸಂಸ್ಥೆಗಳ ಋಜುತ್ವವನ್ನು ಅಲ್ಲಗಳೆಯುವ ಬದಲು ಸರಕಾರವು ಹಸಿವಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಹೇಳಿದರು.
‘ಹಸಿವಿನ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ನೇತೃತ್ವದ ಸರಕಾರವು ಶ್ರಮಿಸಬೇಕಿದೆ. ಕಳೆದ ಎಂಟು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಆಮೆಗತಿಯ ಪ್ರಗತಿಯನ್ನು ನಾವು ನೋಡಿದ್ದೇವೆ ಮತ್ತು ಸರಕಾರದ ದತ್ತಾಂಶಗಳೂ ಇದನ್ನು ಬಹಿರಂಗಗೊಳಿಸಿವೆ ’ ಎಂದು ಖರ್ಗೆ ಹೇಳಿದರು.
‘ಸೋಲಿನ ವಿರುದ್ಧ ಗೆಲುವು ಮತ್ತು ಅಜ್ಞಾನದ ಕುರಿತು ಜಾಗ್ರತಿಯ ಸಂಕೇತವಾಗಿರುವ ದೀಪಾವಳಿಯು ಹೊಸ ಭರವಸೆಗಳು ಮತ್ತು ಹೊಸ ಕನಸುಗಳೊಂದಿಗೆ ಬದುಕನ್ನು ಸಂಭ್ರಮಿಸುವ ಸಂದರ್ಭವಾಗಿದೆ. ಈ ಪವಿತ್ರ ಸಂದರ್ಭವು ನಿಮ್ಮೆಲ್ಲರ ಜೀವನವನ್ನು ಆರೋಗ್ಯ,ಸುಖ ಮತ್ತು ಶಾಂತಿಯಿಂದ ಬೆಳಗಲಿ. ದೀಪಾವಳಿಯ ಶುಭಾಶಯಗಳು ’ ಎಂದೂ ಖರ್ಗೆ ಹಾರೈಸಿದರು.
ಇತ್ತೀಚಿಗೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ ಬಿಡುಗಡೆಗೊಳಿಸಿರುವ ‘ಜಾಗತಿಕ ಹಸಿವು ವರದಿ 2022’ರಲ್ಲಿ 121 ದೇಶಗಳ ಪೈಕಿ ಭಾರತವು 107ನೇ ಸ್ಥಾನದಲ್ಲಿದೆ.
ವರದಿಯನ್ನು ತಿರಸ್ಕರಿಸಿದ್ದ ಸರಕಾರವು,ಸೂಚ್ಯಂಕವು ಹಸಿವೆಯ ತಪ್ಪು ಮಾಪನವಾಗಿದೆ. ಅದನ್ನು ನಿರ್ಧರಿಸಲು ಸೂಕ್ತ ಪದ್ಧತಿಯನ್ನು ಅನುಸರಿಸಲಾಗಿಲ್ಲ ಎಂದು ಹೇಳಿತ್ತು.







