ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ ನಿಧನ

photo Credit Source: Kiran Mazumdar Shaw Facebook Page
ಬೆಂಗಳೂರು, ಅ.24: ಬಯೋಕಾನ್ ಲಿ. ಕಾರ್ಯಾಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರ ಪತಿ ಜಾನ್ ಶಾ(73) ಅವರು ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕರುಳಿನ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಜಾನ್ ಶಾ ಅವರ ಸಾವಿನ ಹಿಂದಿನ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅವರು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಯೋಕಾನ್ ಲಿಮಿಟೆಡ್ನ ಮಾಜಿ ಉಪಾಧ್ಯಕ್ಷರಾಗಿದ್ದರು. ಅವರ ಪತ್ನಿ ಕಿರಣ್ ಮಜುಂದಾರ್ ಶಾ ಇದರ ಕಾರ್ಯಾಧ್ಯಕ್ಷೆಯಾಗಿದ್ದಾರೆ.
ಜಾನ್ ಶಾ ಅವರು ಬ್ರಿಟನ್ನ ಗ್ಲ್ಯಾಸ್ಗೋ ವಿವಿಯಿಂದ ಇತಿಹಾಸ ಮತ್ತು ರಾಜಕೀಯ ಅರ್ಥಶಾಸ್ತ್ರದಲ್ಲಿ ಎಂಎ(ಎಕನಾಮಿಕ್ ಆನರ್ಸ್) ಪದವಿ ಪಡೆದಿದ್ದರು. ಬಯೋಕಾನ್ ಅಲ್ಲದೆ ಅವರು ಮಧುರಾ ಕೋಟ್ಸ್ ಲಿಮಿಟೆಡ್ನ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಕೋಟ್ಸ್ ವಿಯೆಲ್ಲಾ ಗ್ರೂಪ್ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಬಯೋಕಾನ್ನ ಅಧಿಕೃತ ವೆಬ್ಸೈಟ್ ಪ್ರಕಾರ ಜಾನ್ ಶಾ ಅವರು ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದರು. ಅವರು ವಿದೇಶಿ ಪ್ರವರ್ತಕರಾಗಿ ಮತ್ತು ವಿವಿಧ ಬಯೋಕಾನ್ ಗ್ರೂಪ್ ಕಂಪೆನಿಗಳ ಸಲಹಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.







