ನನ್ನ ಶಾಲೆ ಪದವಿಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಲಿ: ಹರೇಕಳ ಹಾಜಬ್ಬ
ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ನಿಂದ ವಾರ್ಷಿಕ ಸಮ್ಮಿಲನ, ಸಾಧಕರಿಗೆ ಸನ್ಮಾನ

ಹರೇಕಳ ಹಾಜಬ್ಬ
ಬೆಂಗಳೂರು, ಅ.24: ನನ್ನ ಬದುಕಿಗೆ ಯಾವುದೇ ಕನಸಿಲ್ಲ. ಆದರೆ ನನ್ನ ಶಾಲೆಗೆ ಮುಂದೆ ಪದವಿ ಪೂರ್ವ ಕಾಲೇಜೊಂದು ಬರಬೇಕು ಎನ್ನುವುದೇ ದೊಡ್ಡ ಕನಸಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ತಿಳಿಸಿದ್ದಾರೆ.
ಸೋಮವಾರ ನಗರದ ಅರಮನೆ ಮೈದಾನದಲ್ಲಿ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ, ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ವಾರ್ಷಿಕ ಸಮ್ಮಿಲನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪುಟ್ಟ ಹಳ್ಳಿ ಹರೇಕಳದ ಬಡವನಿಗೆ ದೇಶದ ರಾಷ್ಟ್ರಪತಿಯವರು ನೀಡಿದ ಈ ಪದ್ಮಶ್ರೀಗಿಂತ ಮಿಗಿಲಾದ ಆಸ್ತಿ ಬೇರೇನಿಲ್ಲ. ಬಡತನದಿಂದಾಗಿ ನಾನು ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಶಾಲೆ ಕಟ್ಟಬೇಕೆಂದು ಕನಸು ಕಂಡೆ. ಅದರಂತೆ ಅನೇಕ ದಾನಿಗಳು, ಸರಕಾರಿ ಅಧಿಕಾರಿಗಳ ಸಹಾಯ ಪಡೆದು ಶಾಲೆ ನಿರ್ಮಿಸಿದೆ. ನನಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಬೇರೆ ಮಕ್ಕಳು ಶಿಕ್ಷಣ ಪಡೆದು ಉತ್ತಮ ಬದುಕು ನಡೆಸಬೇಕು ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಭಾರತದ ನಾಗರಿಕರು ಸೌಹಾರ್ದ ಬೆಳೆಸಿಕೊಳ್ಳಬೇಕು. ಧಾರ್ಮಿಕ, ಪ್ರಾದೇಶಿಕ ಮತ್ತು ಭಾಷಾವಾರು ಪ್ರತ್ಯೇಕತೆಯನ್ನು ಮೀರಿ ನಿಂತು ಸಹೋದರಭಾವ ಮೈಗೂಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸೌಹಾರ್ದತೆ ಎಂಬುದು ಮಾತಿನಲ್ಲಿ ಅಲ್ಲ. ಅದು ಲೋಕ ಜೀವನದಲ್ಲಿ ಹಾಗೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಧರ್ಮ, ನಂಬಿಕೆ, ಕರುಣೆ ಯಾವ ಕಾಲದಲ್ಲಿ ನಮ್ಮನ್ನು ಕೈಕೊಡುತ್ತದೆ ಎಂಬ ಭಯ ನಮ್ಮಲ್ಲಿ ಆವರಿಸುತ್ತದೆ. ಆದರೆ, ಪರಸ್ಪರ ಸಂಬಂಧಗಳು ಹೆಣೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ನ ಸದಸ್ಯ ಬಿ.ಎಂ.ಫಾರೂಕ್ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಮೊಯ್ದಿನ್ ಬಾವಾ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಬಿ.ಎ.ಮುಹಮ್ಮದ್ ಹನೀಫ್, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಯು.ಕೆ.ಹಮೀದ್ ಹಾಝೀ, ಉಪಾಧ್ಯಕ್ಷ ಸಿದ್ದೀಕ್ ಬ್ಯಾರಿ, ಪ್ರಧಾನ ಕಾರ್ಯದರ್ಶಿ ಟಿ.ಕೆ.ಮುಹಮ್ಮದ್ ಶರೀಫ್, ಸಹ ಕಾರ್ಯದರ್ಶಿ ವಹೀದ್ ಖಾಯರ್ ಖಾನ್, ಖಜಾಂಚಿ ಶಂಸುದ್ದೀನ್ ಅಡೂರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
.







