VIDEO- ಕರಾವಳಿಯ ಸಂಸ್ಕೃತಿಯನ್ನು ಬೇರೆಡೆಗೆ ತಲುಪಿಸಿದವರು ಬ್ಯಾರಿಗಳು: ಪುರುಷೋತ್ತಮ ಬಿಳಿಮಲೆ

ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ಕರಾವಳಿಯ ಸಂಸ್ಕೃತಿಯನ್ನು ಬೇರೆಡೆಗೆ ತಲುಪಿಸಿದವರು ಬ್ಯಾರಿಗಳು ಎಂದು ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ವಾರ್ಷಿಕ ಸಮ್ಮಿಲನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ಬ್ಯಾರಿ ಭಾಷೆ’ಯ ಕುರಿತು ವಿಶೇಷ ಉಪನ್ಯಾಸ ಮಾಡಿದರು.
ಬ್ಯಾರಿ ಸಮುದಾಯವನ್ನು ಮೂಲ ನಿವಾಸಿಗಳಲ್ಲ ಎಂದು ಹೇಳುವುದು ಸರಿಯಲ್ಲ. ಏಕೆಂದರೆ, ಅವರ ಭಾಷೆಯೇ ಮೂಲ ಶಬ್ದಗಳನ್ನು ಹೊಂದಿದೆ. ಅನೇಕ ಭಾಷೆಗಳ ಪದಗಳು ಬ್ಯಾರಿ ಭಾಷೆಯಲ್ಲಿ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
ಕ್ರಿ.ಶ.7ನೇ ಶತಮಾನದಲ್ಲಿ ಬ್ಯಾರಿಗಳು ಬೆಲ್ಲ, ಉಪ್ಪು, ಕಾಳು ಮೆಣಸು ವ್ಯಾಪಾರ ಮಾಡುತ್ತಿದ್ದರು. ಒಂದು ಸಮುದಾಯವನ್ನು ದ್ವೇಷಿಸುವ ಜನರ ನಡುವೆ ನಾವು ನಮ್ಮ ತಾಯಿನುಡಿಯನ್ನು ಕಟ್ಟುವ, ಬೆಳೆಸುವ ಕೆಲಸ ಇಂದಿನ ಸವಾಲಾಗಿದೆ ಎಂದು ಅವರು ಹೇಳಿದರು.
ಕಳೆದ 6 ತಿಂಗಳಲ್ಲಿ ಕರ್ನಾಟಕದ ಅತ್ಯುತ್ತಮ ಪ್ರಶಸ್ತಿಗಳು ಬ್ಯಾರಿ ಸಮುದಾಯದ ಲೇಖಕರಿಗೆ ದೊರಕಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಬ್ಯಾರಿಗಳು ಕನ್ನಡದ ಅತ್ಯುತ್ತಮ ಬರಹಗಾರರಾಗುತ್ತಾರೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದರು.







