ಬಾಬರ್ ಅಝಂ ನಾಯಕತ್ವ ಬೆದರಿದ ಹಸುವಿನಂತಿತ್ತು: ಹಫೀಝ್ ಟೀಕೆ
ಭಾರತ ವಿರುದ್ಧ ಟ್ವೆಂಟಿ-20 ವಿಶ್ವಕಪ್

Mohammad Hafeez
ಹೊಸದಿಲ್ಲಿ: ಐಸಿಸಿ ವಿಶ್ವಕಪ್ ಟಿ-20 ಟೂರ್ನಿಯ ಸೂಪರ್-12 ಹಂತದ ಪಂದ್ಯದಲ್ಲಿ ರವಿವಾರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡ ಆಘಾತಕಾರಿ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನದ ಆಲ್ರೌಂಡರ್ ಮೊಹ್ಮದ್ ಹಫೀಝ್ ಅವರು ಬಾಬರ್ ಅಝಂ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.
ಮೆಲ್ಬೋನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯ ಅಗ್ರ ಕ್ರಮಾಂಕ ಆಘಾತಕಾರಿಯಾಗಿ ಕುಸಿತ ಕಂಡರೂ, ಅದ್ಭುತ ಪ್ರದರ್ಶನದ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು.
ಮೊಹ್ಮದ್ ನವಾಝ್ ಅವರನ್ನು 20ನೇ ಓವರ್ನಲ್ಲಿ ಬೌಲಿಂಗ್ಗೆ ಉಳಿಸಿಕೊಳ್ಳುವ ಬಾಬರ್ ನಿರ್ಧಾರ ವಿನಾಶಕಾರಿ ಆಯಿತು ಎಂದು ಟೀಕಿಸಿದ್ದಾರೆ. ಕೊನೆಯ ಆರು ಎಸೆತಗಳಲ್ಲಿ 16 ರನ್ಗಳಿಗೆ ಭಾರತವನ್ನು ಕಟ್ಟಿಹಾಕಲು ಸಾಧ್ಯವಾಗದೇ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಅನುಭವಿಸಬೇಕಾಯಿತು. ಪಾಕಿಸ್ತಾನದ ಜನಪ್ರಿಯ ಚಾನಲ್ನಲ್ಲಿ ಗೆಸ್ಟ್ ಸ್ಪೀಕರ್ ಆಗಿ ಕಾಣಿಸಿಕೊಂಡ ಹಫೀಝ್ ಅವರು ಬಾಬರ್ ಅವರ ನಾಯಕತ್ವವನ್ನು ಕಟುವಾಗಿ ಟೀಕಿಸಿದರು.
"ಬಾಬರ್ ಅಝಂ ನಾಯಕತ್ವ ಬೆದರಿದ ಹಸುವಿನಂತೆ; ಇದನ್ನು ಟೀಕಿಸಲಾಗದು. ಬಾಬರ್ ನಾಯಕತ್ವದಲ್ಲಿ ದೋಷ ಕಂಡಿರುವುದು ಇದು ಸತತ ಮೂರನೇ ಬಾರಿ. ಆದರೆ 32ನೇ ವರ್ಷದಲ್ಲೂ ಅವರು ಕಲಿಯುತ್ತಾರೆ ಎನ್ನುವುದನ್ನು ಕೇಳಿಸಿಕೊಳ್ಳುತ್ತಲೇ ಬಂದಿದ್ದೇವೆ. ಇಂದಿನ ಪಂದ್ಯದಲ್ಲಿ 7 ರಿಂದ 11ನೇ ಓವರ್ ವರೆಗೂ ಭಾರತ ಪ್ರತಿ ಓವರ್ಗೆ 4 ರನ್ ಗಳಿಸಲೂ ಪರದಾಡುತ್ತಿತ್ತು. ಈ ಅವಧಿಯಲ್ಲಿ ಬಾಬರ್ ಏಕೆ ಸ್ಪಿನ್ ಕೋಟಾವನ್ನು ಮುಗಿಸಲಿಲ್ಲ ಎಂದು ರಾಹಿ ಕ್ರಿಕೆಟ್ ಕಾರ್ಯಕ್ರಮದಲ್ಲಿ ಹಫೀಝ್ ಪ್ರಶ್ನಿಸಿದರು.







