ಗೋಪಾಲ್ ಶೆಟ್ಟಿ ‘ಮಾನವ ರತ್ನ’, ಅಬ್ದುಲ್ಲಾ ಪರ್ಕಳ ‘ಸೇವಾರತ್ನ’ ಪ್ರಶಸ್ತಿಗೆ ಆಯ್ಕೆ
ಅ.29ರಂದು ಉಡುಪಿ ಮುಸ್ಲಿಮ್ ಒಕ್ಕೂಟದಿಂದ ಸ್ನೇಹ ಸಮಾವೇಶ

ಗೋಪಾಲ್ ಶೆಟ್ಟಿ - ಅಬ್ದುಲ್ಲಾ ಪರ್ಕಳ
ಉಡುಪಿ, ಅ.25: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಹಾಗೂ ‘ಮಾನವ ರತ್ನ’ ಹಾಗೂ ‘ಸೇವಾರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.29ರಂದು ಸಂಜೆ 6.30ಕ್ಕೆ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಇರ್ಷಾದ್ ಅಹ್ಮದ್ ನೇಜಾರ್ ತಿಳಿಸಿದ್ದಾರೆ.
ಉಡುಪಿಯ ಪತ್ರಿಕಾ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ಎರಡು ವರ್ಷಗಳಿಗೊಮ್ಮೆ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯದ ವಾತಾರವಣ ನಿರ್ಮಾಣಕ್ಕಾಗಿ ಶ್ರಮಿಸುವ ಜಿಲ್ಲೆಯ ಹಿರಿಯ ಗಣ್ಯರಿಗೆ ನೀಡಲಾಗುವ ‘ಮಾನವ ರತ್ನ’ ಪ್ರಶಸ್ತಿಗೆ ಈ ಬಾರಿ ವಿಚಾರವಾದಿ, ಸಾಹಿತಿ ಗೋಪಾಲ್ ಬಿ.ಶೆಟ್ಟಿ ಹಾಗೂ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದ ಹಿರಿಯರಿಗೆ ನೀಡುವ ‘ಸೇವಾರತ್ನ’ ಪ್ರಶಸ್ತಿಗೆ ಹಿರಿಯರಾದ ಹಾಜಿ ಅಬ್ದುಲ್ಲಾ ಪರ್ಕಳ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು, ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಸಮುದಾಯಗಳ ಹಿರಿಯರಾದ ಅಲೆಯೂರು ಗಣಪತಿ ಕಿಣಿ, ಜನಾರ್ದನ ತೋನ್ಸೆ, ಈಶ್ವರ ಮಲ್ಪೆ ಹಾಗೂ ಸುಶೀಲ ನಾಡ ಅವರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಶೈಕ್ಷಣಿಕ ರಂಗದಲ್ಲಿನ ಸೇವೆಗಾಗಿ ಮೂಳೂರಿನ ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ವಿಶೇಷ ಮಕ್ಕಳ ಸೇವೆಗಾಗಿ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗಳನ್ನು ಗೌರವಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮುಖ್ಯ ಭಾಷಣ ಮಾಡಲಿದ್ದು, ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ವಿವಿ ಸಂಶೋಧನಾ ಮತ್ತು ಬೋಧನಾ ಸಹಾಯಕಿ ಡಾ.ಹಸೀನಾ ಎಚ್.ಕೆ. ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಹೇಬ್ ಕೋಟ ವಹಿಸಲಿರುವರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ್ ಕಾಂಚನ್, ಜನತಾದಳ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕರ್ ನೇಜಾರ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಸುಂದರ್ ಮಾಸ್ಟರ್ ಹಾಗೂ ಕ್ರೈಸ್ತ ಮುಖಂಡ ವಿನೋದ್ ಕ್ರಾಸ್ತ ಗೌರವ ಅತಿಥಿಗಳಾಗಿರುವರು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಉಪಾಧ್ಯಕ್ಷೆ ಇದ್ರೀಸ್ ಹೂಡೆ, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ಉಪಸ್ಥಿತರಿದ್ದರು







