ನಿವೇಶನ ಹಂಚದ BDA ವಿರುದ್ಧ ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಅ.25: ಹಣ ಪಾವತಿ ಮಾಡಿದ್ದರೂ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡದಿರುವುದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಏರ್‍ಕ್ರಾಫ್ಟ್ ಎಂಪ್ಲಾಯೀಸ್ ಕೋ-ಆಪರೇಟಿವ್ ಸೊಸೈಟಿ ನಿರ್ಮಿಸಿರುವ ಲೇಔಟ್‍ನಲ್ಲಿ ಹಣ ತುಂಬಿದ್ದರೂ ನಿವೇಶನ ನೀಡಿಲ್ಲ ಎಂದು ಆಕ್ಷೇಪಿಸಿ ಬಿ.ಆರ್.ಹೇಮಾಪ್ರಕಾಶ್ ಸೇರಿ ಐವರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಾಗೂ ತಕರಾರು ಅರ್ಜಿಗಳು ವಿಚಾರಣೆಗೆ ಬಾಕಿಯಿದೆ. ಪರಿಷ್ಕøತ ನಕ್ಷೆಗೆ ಸರಕಾರ ಹಸಿರು ನಿಶಾನೆ ತೋರಿಲ್ಲ ಎಂದು ಬಿಡಿಎ ಪರ ವಕೀಲರು ವಿವರಣೆ ನೀಡಲು ಮುಂದಾದರು.
ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಹತ್ತು ವರ್ಷಗಳಾಗಿವೆ. ನಿಮ್ಮ ಜತೆ ಹೋರಾಟ ನಡೆಸುತ್ತಾ ಫಲಾನುಭವಿಗಳು ಇದ್ದಲ್ಲಿಯೇ ಸಮಾಧಿ ಕಟ್ಟಿಕೊಳ್ಳಬೇಕೇ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿ, ನ್ಯಾಯಪೀಠ ವಿಚಾರಣೆಯನ್ನು ನ.2ಕ್ಕೆ ಮುಂದೂಡಿತು.





