ಕೊಯಂಬತ್ತೂರು ಕಾರು ಸ್ಫೋಟ ಪ್ರಕರಣ: ಐವರ ಬಂಧನ; ಆತ್ಮಾಹುತಿ ದಾಳಿಗೆ ಯಾವುದೇ ಪುರಾವೆ ಇಲ್ಲ ಎಂದ ಪೊಲೀಸ್

Photo: PTI
ಚೆನ್ನೈ, ಅ. 25: ಕೋಯಂಬತ್ತೂರಿನ ದೇವಾಲಯವೊಂದರ ಹೊರಗೆ ರವಿವಾರ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಜಮೀಶಾ ಮುಬಿನ್ ಎರಡು ಸಿಲಿಂಡರ್ಗಳಲ್ಲಿ ಒಂದನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ಸಂದರ್ಭ ಉಕ್ಕಡಂ ಪ್ರದೇಶದ ದೇವಾಲಯದ ಸಮೀಪ ರವಿವಾರ ಮುಂಜಾನೆ ಸ್ಪೋಟಗೊಂಡಿತ್ತು. ಈ ಸ್ಫೋಟದಲ್ಲಿ ಜಮೀಶಾ ಮುಬಿನ್ ಮೃತಪಟ್ಟಿದ್ದ. ಆತನ ಮನೆಯಲ್ಲಿ ದೊಡ್ಡ ಪ್ರಮಾಣದ ಸ್ಫೋಟಕ ಪತ್ತೆಯಾದ ಬಳಿಕ ಪೊಲೀಸರು ಭಯೋತ್ಪಾದನೆ ನಂಟಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಯೋಜನೆಯ ಬಗ್ಗೆ ತಿಳಿದ ಹೊರತಾಗಿಯೂ ಕಾರಿಗೆ ಸಿಲಿಂಡರ್ಗಳು, ಕಡಿಮೆ ತೀವ್ರತೆಯ ಸ್ಫೋಟಕ ವಸ್ತುಗಳನ್ನು ಹೇರಿಸಲು ಜಮೀಶಾ ಮುಬಿನ್ಗೆ ಆತನ ಗೆಳೆಯರಾದ ನವಾಝ್ ಇಸ್ಮಾಯಿಲ್, ಫಿರೋಝ್ ಇಸ್ಮಾಯಿಲ್ ಹಾಗೂ ಮುಹಮ್ಮದ್ ರಿಯಾಝ್ ನೆರವು ನೀಡಿದ್ದಾರೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ಇನ್ನೋರ್ವ ಶಂಕಿತ ಮುಹಮ್ಮದ್ ಅಝರುದ್ದೀನ್ ಸಂಯೋಜನೆಯಲ್ಲಿ ಭಾಗಿಯಾಗಿದ್ದಾನೆ. ಗುಜಿರಿ ವ್ಯಾಪಾರಿಯಾಗಿರುವ ತಲ್ಕಾ ಕಾರ್ಯಾಚರಣೆಗೆ ಉಚಿತ ಮಾರುತಿ ಕಾರು ಒದಗಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಜಮೀಶಾ ಮುಬಿನ್ನ ಮನೆಯಿಂದ ಪೊಲೀಸರು ಸ್ಫೋಟಕ ರಾಸಾಯನಿಕಗಳನ್ನು ಪತ್ತೆ ಮಾಡಿದ್ದರು. ಸ್ಫೋಟಕ ಕೊಂಡೊಯ್ದವನೇ ಹತ್ಯೆಯಾದ ಈ ಸ್ಫೋಟ ಪ್ರಕರಣ ಆತ್ಮಹತ್ಯಾ ಕಾರ್ಯಾಚರಣೆಯಂತೆ ಕಂಡು ಬರುತ್ತಿಲ್ಲ. ಆದರೆ, ಭಾರೀ ಹಾನಿ ಉಂಟು ಮಾಡುವ ಹಾಗೂ ಸ್ಫೋಟ ಆಕಸ್ಮಿಕ ಎಂದು ನಿರೂಪಿಸುವ ಉದ್ದೇಶವನ್ನು ಹೊಂದಿದ್ದ ಬಗ್ಗೆ ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







