ಭೂಪಾಲ್: ಅಂ.ರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಿದ ಯಕ್ಷಗಾನ

ಉಡುಪಿ, ಅ.25: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ರಾಮ್ ಲೀಲಾ ಉತ್ಸವದಲ್ಲಿ ಏಳು ರಾಷ್ಟ್ರಗಳ ವಿವಿಧ ಜನಪದ ಕಲಾತಂಡಗಳೊಂದಿಗೆ ಭಾಗವಹಿಸಿದ ಉಡುಪಿಯ ಯಕ್ಷಗಾನ ತಂಡ ಪ್ರಸ್ತುತ ಪಡಿಸಿದ ಯಕ್ಷಗಾನ ಬ್ಯಾಲೆಗಳು ಎಲ್ಲರ ಪ್ರಶಂಸನೆಗೆ ಪಾತ್ರವಾಗಿವೆ.
ವಿಯೆಟ್ನಾಮ್, ಥೈಲ್ಯಾಂಡ್, ಫಿಜೀ, ಅಮೆರಿಕ, ಶ್ರೀಲಂಕಾ, ಮಲೇಷಿಯಾ ಹಾಗೂ ಆತಿಥೇಯ ಭಾರತದ ತಂಡ ಗಳು ತಮ್ಮಲ್ಲಿನ ಕಲೆಯನ್ನು ಪ್ರಸ್ತುತ ಪಡಿಸಿದ್ದವು. ಭಾರತದಿಂದ ಆಯ್ಕೆಗೊಂಡ ಅಸ್ಸಾಂ, ಒರಿಸ್ಸಾ, ಕರ್ನಾಟಕದ ತಂಡಗಳು ರಾಮಾಯಣದ ಆಯ್ದ ಕೆಲವು ಭಾಗಗಳನ್ನು ಪ್ರದರ್ಶಿಸಿದ್ದವು.
ಕರ್ನಾಟಕದಿಂದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಉಡುಪಿಯ ಯಕ್ಷಗಾನ ತಂಡವು ವನಾಗಮನ, ಸೀತಾಪಹರಣ, ಜಟಾಯು ಪ್ರಸಂಗವನ್ನು ಬ್ಯಾಲೆಯ ರೂಪದಲ್ಲಿ ಪ್ರಸ್ತುತ ಪಡಿಸಿತ್ತು. ಯಕ್ಷಗಾನದ ವೇಷ ಭೂಷಣಕ್ಕೆ ಮನಸೋತ ಅಲ್ಲಿನ ಜನರು ಪ್ರಸಂಗದ ಪೂರ್ವಭಾಗದಿಂದ ಹಿಡಿದು ಮಂಗಳ ಪದ್ಯದವರೆಗೂ ರಂಗಸ್ಥಳದಲ್ಲೇ ತಮ್ಮ ದೃಷ್ಠಿಯನ್ನು ನೆಟ್ಟು ಬ್ಯಾಲೆಯನ್ನು ವಿಕ್ಷಿಸಿದ್ದರು.
ಈ ಯಕ್ಷ ಬ್ಯಾಲೆಗಳ ನಿರ್ದೇಶನವನ್ನು ‘ಯಕ್ಷ ಸಂಜೀವ ಕೇಂದ್ರ’ದ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರು ಮಾಡಿದ್ದರು. ಪ್ರದರ್ಶನ ಒಟ್ಟು ಎರಡು ಗಂಟೆಯದಾಗಿದ್ದು, ಮೊದಲ ಭಾಗದಲ್ಲಿ ಸಾಂಪ್ರದಾಯಿಕವಾಗಿ ಪೂರ್ವರಂಗದ ಕೆಲವು ಭಾಗವನ್ನು ತೋರಿಸಲಾಗಿತ್ತು. ನಂತರ ಕಥಾ ಪ್ರಸಂಗವನ್ನು ಪ್ರಸ್ತುತ ಪಡಿಸಲಾಗಿತ್ತು.
ಪ್ರದರ್ಶನ ಮುಕ್ತಾಯಗೊಂಡಾಗ ಪ್ರೇಕ್ಷಕರು ಯಕ್ಷ ಸಂಜೀವ ಯಕ್ಷಗಾನ ಕೇಂದ್ರದ ಕಲಾವಿದರಿಗೆ ಎದ್ದು ನಿತ್ತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. ಐದು ದಿನಗಳ ಪ್ರದರ್ಶನದಲ್ಲಿ ಅಲ್ಲಿನ ಜನರು ೨ಗಂಟೆಗಳ ಕಾಲದ ವನಾಗಮನ, ಸೀತಾಪಹಾರಣ, ಜಟಾಯು ಪ್ರಸಂಗವನ್ನು ನೋಡಿ ಆನಂದಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು ಎಂದು ತಂಡದ ಕಲಾವಿದರು ತಿಳಿಸಿದರು.
ಗುರು ಬನ್ನಂಜೆ ಸಂಜೀವ ಸುವರ್ಣರು ಯಕ್ಷ ಸಂಜೀವ ಕೇಂದ್ರವನ್ನು ತ್ತೀಚೆಗೆ ಪ್ರಾರಂಭಿಸಿದ್ದು, ಅವರ ಯಕ್ಷ ತಂಡಕ್ಕೆ ದೊರೆತ ಮೊದಲ ಅಂತಾರಾಷ್ಟ್ರೀಯ ವೇದಿಕೆಯ ಪ್ರದರ್ಶನದಲ್ಲಿ ಜನ ಮೆಚ್ಚುಗೆ ಸಿಕ್ಕಿದೆ ಎಂದು ಕಲಾವಿದರು ತಿಳಿಸಿದ್ದಾರೆ.










