‘ಬೆಳಕು’ ಯೋಜನೆಯಡಿ 2.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ: ಸಚಿವ ಸುನೀಲ್ ಕುಮಾರ್

ಕುಂದಾಪುರ, ಅ.25: ಸರಕಾರದ ಮಹತ್ವಾಕಾಂಕ್ಷೆಯ ‘ಬೆಳಕು’ ಯೋಜನೆಯ ಅಡಿಯಲ್ಲಿ ರಾಜ್ಯದ ಅಂದಾಜು 2.5ಲಕ್ಷ ಮನೆಗಳಿಗೆ ಸರಳ ವ್ಯವಸ್ಥೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕುಂದಾಪುರದ ಮೆಸ್ಕಾಂ ವಿಭಾಗದ ಹಾಲ್ಕಲ್‌ನಲ್ಲಿ 33/11 ಕೆವಿ ಸಾಮರ್ಥ್ಯದ ಕೊಲ್ಲೂರು ವಿದ್ಯುತ್ ಉಪ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸುಟ್ಟು ಹೋದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು 24 ಗಂಟೆಗಳ ಒಳಗೆ ಪುನರ್ ಸ್ಥಾಪಿಸುವ ಐ.ಸಿ ಬ್ಯಾಂಕ್ ಯೋಜನೆಯಡಿಯಲ್ಲಿ 200ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮಗಳನ್ನು ಬದಲಾಯಿಸಲಾಗಿದೆ. ಗ್ರಾಹಕರ ಸಮಸ್ಯೆಗಳನ್ನು ಅರಿತುಕೊಂಡು ಕ್ಷಿಪ್ರ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗಲೆಂದು ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಹಕರ ಅದಾಲತ್ ನಡೆಸಲಾಗುತ್ತಿದೆ ಎಂದರು.
ವಿದ್ಯಾನಿಧಿ, ಗ್ರಾಮ ಒನ್, ಆಯುಷ್ಮಾನ್ ಮುಂತಾದ ಜನಪರ ಯೋಜನೆಗಳೊಂದಿಗೆ ಜನರ ಅನುಕೂಲಕ್ಕಾಗಿ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಗ್ರಾಪಂಗಳಿಂದ ನಿರಪೇಕ್ಷಣಾ ಪತ್ರಗಳ ಅವಶ್ಯಕತೆ ಇಲ್ಲದೆ ಕೇವಲ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‌ಗಳ ಆಧಾರದಲ್ಲಿ ವಿದ್ಯುತ್ ಸಂಪರ್ಕ ಖಾತ್ರಿ ಪಡಿಸುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಕೊಲ್ಲೂರಿನಲ್ಲಿ ವಿದ್ಯುತ್ ಸರಬರಾಜು ಉಪ ಕೇಂದ್ರ ಆರಂಭವಾಗುವ ಮೂಲಕ ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿದಂತಾಗಿದೆ. ಈ ಉಪ ಕೇಂದ್ರ ದಿಂದ 1750 ಪಂಪ್ ಸೆಟ್‌ಗಳಿಗೆ ಅನೂಕೂಲವಾಗಲಿದೆ. ಕರ್ಕುಂಜೆ ಹಾಗೂ ಸುತ್ತ-ಮುತ್ತಲಿನ ಪರಿಸರದವರಿಗೆ ಅನೂಕೂಲವಾಗಲು ಕರ್ಕುಂಜೆಯಲ್ಲಿ ವಿದ್ಯುತ್ ಉಪ ವಿಭಾಗ ಕೇಂದ್ರ ಹಾಗೂ ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೊಲ್ಲೂರಿನಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಗೋಳಿಹೊಳೆ ಗ್ರಾಪಂ ಅಧ್ಯಕ್ಷೆ ಇಂದಿರಾ, ಕೊಲ್ಲೂರು ಗ್ರಾಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಜಡ್ಕಲ್ ಗ್ರಾಪಂ ಅಧ್ಯಕ್ಞೆ ವನಜಾಕ್ಷೀ ಎಸ್ ಶೆಟ್ಟಿ, ಇಡೂರು-ಕುಂಜ್ಞಾಡಿ ಗ್ರಾಪಂ ಅಧ್ಯಕ್ಷ ಅಮೀನ್ ಶೆಟ್ಟಿ, ಕಾಲ್ತೋಡು ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಆಚಾರಿ, ಮೆಸ್ಕಾಂ ತಾಂತ್ರಿಕಾ ವಿಭಾಗದ ನಿರ್ದೇಶಕಿ ಡಿ.ಪದ್ಮಾವತಿ, ಉಡುಪಿ ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯ, ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ, ಮೆಸ್ಕಾಂ ಕುಂದಾಪುರ ವಿಭಾಗದ ಕಾರ್ಯನಿರ್ವಾ ಹಕ ಇಂಜಿನಿಯರ್ ರಾಕೇಶ್ ಬಿ. ಉಪಸ್ಥಿತರಿದ್ದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು.







