ತಾಯಿಯಿಂದಲೇ ಪುತ್ರಿ, ಆಕೆಯ ಪ್ರಿಯಕರನ ಕೊಲೆ ಆರೋಪ: ಮರ್ಯಾದಾ ಹತ್ಯೆ ಶಂಕೆ

ಪಾಟ್ನಾ, ಅ. 25: ಇಲ್ಲಿನ ಬೆಗುಸರಾಯ್ ರೈಲ್ವೆ ನಿಲ್ದಾಣದಿಂದ 3 ಕಿ.ಮೀ. ಪೂರ್ವದ ರೈಲು ಹಳಿಯಲ್ಲಿ ಯುವಕ-ಯುವತಿಯ ಮೃತದೇಹ ಪತ್ತೆಯಾಗಿದ್ದು, ಇದು ಮರ್ಯಾದೆ ಹತ್ಯೆ ಎಂದು ಶಂಕಿಸಲಾಗಿದೆ.
ಮೃತಪಟ್ಟವರನ್ನು ಲಾಖೋ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಪುರ ದುಮ್ರಿ ನಿವಾಸಿ ರಾಮ್‌ನೂನು ಪಾಸ್ವಾನ್ (25) ಹಾಗೂ ಅಯೋಧ್ಯೆ ಬರಿ ಗ್ರಾಮದ ನಿವಾಸಿ, ಸರಪಂಚರಾದ ಅನಿತಾ ದೇವಿ ಪುತ್ರಿ ರೂಪಂ ಕುಮಾರಿ ಎಂದು ಗುರುತಿಸಲಾಗಿದೆ.
‘‘ಈ ಅವಳಿ ಕೊಲೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ನನ್ನ ಪುತ್ರಿ ಹಾಗೂ ನಮ್ಮ ಚಾಲಕನಾಗಿದ್ದ ಯುವಕ ದೀರ್ಘಕಾಲದಿಂದ ಸ್ನೇಹದಲ್ಲಿದ್ದರು. ಇದರ ಬಗ್ಗೆ ತಿಳಿದಾಗ ನಾವು ಆತನನ್ನು ಕೆಲಸದಿಂದ ವಜಾಗೊಳಿಸಿದ್ದೆವು. ಅನಂತರ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಅನಿತಾ ದೇವಿ ಅವರು ತಿಳಿಸಿದ್ದಾರೆ.
ಅನಿತಾ ದೇವಿ ಅವರ ಮನೆಯಲ್ಲಿ ರಾಮ್‌ನೂನು ಕಳೆದ ಹಲವು ವರ್ಷಗಳಿಂದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆತ ಅವರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಅವರು ಉದ್ಯೋಗದಿಂದ ವಜಾಗೊಳಿಸಿದ ಬಳಿಕವೂ ಆತ ಆಕೆಯನ್ನು ಭೇಟಿಯಾಗುವುದನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆ ಹಿಂದೆ ಅನಿತಾ ದೇವಿಯ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಅವರು ಮೊದಲು ಪುತ್ರಿಯನ್ನು ಹತ್ಯೆಗೈದಿದ್ದಾರೆ. ಅನಂತರ ಟ್ರ‍್ಯಾಕ್ಟರ್ ಟ್ರಾಲಿಯಿಂದ ಮರಳನ್ನು ಇಳಿಸುವ ನೆಪದಲ್ಲಿ ಚಾಲಕನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಮನೆಗೆ ಬಂದ ಆತನನ್ನು ಸಹವರ್ತಿಗಳೊಂದಿಗೆ ಸೇರಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಬಳಿಕ ಮೃತದೇಹಗಳನ್ನು ರೈಲು ಹಳಿಯಲ್ಲಿ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಅವಳಿ ಕೊಲೆಯ ವಿರುದ್ಧ ಜನರು ಪ್ರತಿಭಟನೆ ನಡೆಸಿದ ಬಳಿಕ ಯುವತಿಯ ಹೆತ್ತವರು ಲಾಖೋ ಪೊಲೀಸ್ ಠಾಣೆಯಲ್ಲಿ ಶರಣಾಗತರಾಗಿದ್ದಾರೆ. ಅವಳಿ ಸಾವಿನ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.-----------------------------------------------







