ಮಂಗಳೂರು: ಸೂರ್ಯಗ್ರಹಣ ವೀಕ್ಷಣೆ

ಮಂಗಳೂರು, ಅ.25: ದೀಪಾವಳಿಯ ಅಮವಾಸ್ಯೆ ದಿನವಾದ ಮಂಗಳವಾರ ನಗರದ ವಿವಿಧೆಡೆ ಗೋಚರಿಸಿದ ಸೂರ್ಯಗ್ರಹಣವನ್ನು ಸಾರ್ವಜನಿಕರು ವೀಕ್ಷಿಸಿದರು. ಆದರೆ ದೀಪಾವಳಿಯ ಸಂಭ್ರಮದ ಹಿನ್ನೆಲೆಯಲ್ಲಿ ಸೂರ್ಯ ಗ್ರಹಣ ವೀಕ್ಷಣೆಯು ತುಸು ಮಸುಕಾಗಿತ್ತು. ಆದಾಗ್ಯೂ ನಗರದ ಹಲವು ದೇವಸ್ಥಾನಗಳಲ್ಲಿ ರುದ್ರಪಾರಾಯಣ, ವಿಶೇಷ ಪೂಜೆಗಳು ನೆರವೇರಿದವು.
ಗ್ರಹಣದ ಹಿನ್ನಲೆಯಲ್ಲಿ ಮಂಗಳವಾರ ಮಧ್ಯಾಹ್ನ ೧೨ರಿಂದ ೧ ಗಂಟೆ ಅವಧಿಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಮಹಾಪೂಜೆ ನಡೆದು ಪ್ರಧಾನ ಬಾಗಿಲು ಹಾಕಲಾಯಿತು. ಸಂಜೆ ೭ರ ಬಳಿಕ ದೇವಾಲಯಗಳ ಬಾಗಿಲು ತೆರೆದಿದ್ದು, ಈ ಸಂದರ್ಭ ಭಕ್ತರು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಕಟೀಲು, ಪೊಳಲಿ, ಮಂಗಳಾದೇವಿ, ಕದ್ರಿ, ಕುದ್ರೋಳಿ, ಬೋಳೂರು, ಬೋಳಾರ, ಬಪ್ಪನಾಡು, ಸಸಿಹಿತ್ಲು ಮತ್ತಿತರ ದೇವಸ್ಥಾನಗಳಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಧಾರ್ಮಿಕ ಕಾರ್ಯ ನೆರವೇರಲಿಲ್ಲ.
ಯೆನಪೊಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಗರದ ಬಲ್ಮಠದಲ್ಲಿರುವ ಯೆನಪೊಯ ಕಾಲೇಜಿನ ೬ನೇ ಮಹಡಿಯಲ್ಲಿ ಸೂರ್ಯಗ್ರಹಣ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಪಣಂಬೂರು ಕಡಲ ತೀರದಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಹಣ ವೀಕ್ಷಣೆಗಾಗಿ ತಯಾರಿಸಿದ ಸೌರ ಕನ್ನಡಕಗಳು, ಪಿನ್ ಹೋಲ್ ಪ್ರೊಜೆಕ್ಷನ್ ಮತ್ತು ಸೋಲಾರ್ ಫಿಲ್ಟರ್ ಅಳವಡಿಸಿದ ದೂರದರ್ಶಕಗಳ ಮೂಲಕ ಸಾರ್ವಜನಿಕರು ಸೂರ್ಯ ಗ್ರಹಣವನ್ನು ವೀಕ್ಷಿಸಿದರು.
ಪಣಂಬೂರು ಕಡಲ ತೀರದಲ್ಲಿ ಗ್ರಹಣವು ಸಂಜೆ ಸುಮಾರು ೫.೦೯ಕ್ಕೆ ಆರಂಭವಾಗಿದ್ದು, ಸುಮಾರು ೫.೫೦ಕ್ಕೆ ಗರಿಷ್ಠ ಪ್ರಮಾಣದಲ್ಲಿತ್ತು. ಸಂಜೆ ೬.೦೬ಕ್ಕೆ ಸೂರ್ಯಾಸ್ತವಾಗಿದ್ದು, ೬.೨೮ರ ವೇಳೆಗೆ ಗ್ರಹಣವು ಸಂಪೂರ್ಣಗೊಂಡಿತ್ತು.
ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಹಾನಿಕಾರಕ. ದೂರದರ್ಶಕದಿಂದ (ಟೆಲೆಸ್ಕೋಪ್) ಪರದೆಯ ಮೇಲೆ ಕಾಣಲಾಗುವ ಗ್ರಹಣದ ಬಿಂಬ ಅಥವಾ ಲಭ್ಯವಿರುವ ಪ್ರಮಾಣೀಕರಿಸಿದ ಸೌರಕನ್ನಡಕವನ್ನು ಬಳಸಿಯೇ ನೋಡಬೇಕಾದುದರಿಂದ ಖಗೋಳಾಸಕ್ತರು ಭಾಗವಹಿಸಿದ್ದರು ಎಂದು ಮಂಗಳೂರಿನ ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಸಂಘದ ರೋಹಿತ್ ರಾವ್ ಮತ್ತು ಡಾ. ಸಂಗೀತಲಕ್ಷ್ಮೀ ಎಂ.ಜೆ ತಿಳಿಸಿದ್ದಾರೆ.










