ಮೈಸೂರು ಸುಂದರ ನಗರ ಎನಿಸಿಕೊಳ್ಳಲು ಮಿರ್ಜಾ ಇಸ್ಮಾಯಿಲ್ ಶ್ರಮವೇ ಕಾರಣ: ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ

ಬೆಂಗಳೂರು, ಅ.25: ‘ದಿವಾನ್ ಸರ್.ಮಿರ್ಜಾಇಸ್ಮಾಯಿಲ್ ಅವರಲ್ಲಿ ಸೌಜನ್ಯ, ವಿನಯ ಹಾಗೂ ಕಾರ್ಯತತ್ಪರತೆ ಇತ್ತು. ಅವರ ಶ್ರಮದಿಂದಾಗಿಯೇ ಇವತ್ತು ಮೈಸೂರು ಅತ್ಯಂತ ಸುಂದರನಗರ ಎನಿಸಿಕೊಂಡಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ನಾಡೋಜ ಡಾ.ಮಹೇಶ ಜೋಶಿ ಅವರು ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಷತ್ತಿನ ಆಧಾರ ಸ್ಥಂಭಗಳಲ್ಲಿ ಪ್ರಮುಖರಾದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ 137ನೆ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮಿರ್ಜಾ ಇಸ್ಮಾಯಿಲ್ ಅವರು ಪರ್ಷಿಯಾ ಮೂಲದವರಾದರೂ ಕನ್ನಡದ ಮೇಲೆ ಅಪಾರ ಗೌರವ ಹೊಂದಿದ್ದರು. ಕಸಾಪ ಬೆಳೆಯುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಕಸಾಪಗೆ ಸ್ಥಳದ ಅವಶ್ಯಕತೆ ಇದೆ ಎಂದಾಗ ಕಸಾಪ ಇರುವ ಈಗಿನ ಜಾಗವನ್ನು ಉಚಿತವಾಗಿ ನೀಡಿ, ‘ಕನ್ನಡ ತಾಯಿಯ ದೇಗುಲ ಇಲ್ಲಿ ಸಿದ್ದವಾಗಲಿ' ಎಂಬಮಾತನ್ನುಹೇಳಿದ್ದರು. ಕಸಾಪ ಮತ್ತು ಕನ್ನಡಸಂಘಗಳು‘ಕನ್ನಡದ ಅರಿವನ್ನುಬೆಳಗುವನಂದಾದೀಪಗಳು' ಎಂದುಬಣ್ಣಿಸಿದ್ದರು ಎಂದುಹೇಳಿದರು.
‘ಕೃಷ್ಣರಾಜ ಒಡೆಯರಂತಹ ದೊರೆಯಿಲ್ಲ, ಮಿರ್ಜಾ ಇಸ್ಮಾಯಿಲ್‍ರಂತಹ ಮಂತ್ರಿ ಇಲ್ಲ' ಎನ್ನುವ ಗಾದೆ ಮಾತು ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ ಜನಜನಿತವಾಗಿತ್ತು. ಅಲ್ಲದೆ, ಮಿರ್ಜಾ ಅವರು ಸೋಮಾರಿತನ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ದಕ್ಷತೆಗೆ ಸದಾ ಪ್ರೋತ್ಸಾಹಿಸುತ್ತಿರುವುದನ್ನು ಜೋಶಿ ಅವರು ನೆನಪಿಸಿಕೊಂಡರು.
ಮಿರ್ಜಾ ಇಸ್ಮಾಯಿಲ್ ಅವರ ಕುರಿತು ಉಪನ್ಯಾಸವನ್ನು ನೀಡಲು ಆಗಮಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ ಉಷಾಲ ಅವರು ಮಾತನಾಡಿ, ‘ಮಿರ್ಜಾ ಇಸ್ಮಾಯಿಲ್ ಅವರು ತಮ್ಮೊಂದಿಗೆ ಎಲ್ಲರೂ ಬೆಳೆಯಬೇಕು, ಎನ್ನುವ ಭಾವನೆ ಹೊಂದಿದ್ದರು. ಅಲ್ಲದೆ, ನಾಡು ಕಂಡ ಅಪ್ರತಿಮ ರಾಷ್ಟ್ರಭಕ್ತರಾದ ಇಸ್ಮಾಯಿಲ್ ಅವರು ದೈವಾಧಿನರಾದಾಗ ಜಾತಿ ಧರ್ಮ ಮರೆತು ಜನರು ಕಣ್ಣಿರು ಹಾಕಿದ್ದನ್ನು ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆಪುಸ್ತಕದಲ್ಲಿಬರೆದಿದ್ದಾರೆ' ಎಂದುಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಅವರು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ಮಹಾಲಿಂಗಯ್ಯ ವಂದಿಸಿದರು. ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಕಾರ್ಯಕ್ರಮ ನಿರ್ವಹಿಸಿದರು.
--------------------------------------------------
ಕೈಗಾರಿಕೆಗಳು ಇರಲಿ ಎನ್ನುವ ಉದ್ದೇಶ ಮಿರ್ಜಾರಲ್ಲಿತ್ತು: ಅಬ್ದುಲ್ ಬಶೀರ್
‘ಮಿರ್ಜಾ ಇಸ್ಮಾಯಿಲ್ ಅವರಿಗೆ ಕಾಶ್ಮಿರದ ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗ ಅವರು ಅದನ್ನು ಗೌರವ ಪೂರ್ವಕವಾಗಿ ತಿರಸ್ಕರಿಸಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೂಗರ್ಭ ಶಾಸ್ತ್ರ ವಿಷಯದಲ್ಲಿ ಕಲಿತ ಮಿರ್ಜಾ ಅವರು ಯಾವುದೇ ಶಿಕ್ಷಕರು ಕಂಡರೂ ಗೌರವದಿಂದ ನಮಿಸುತ್ತಿದ್ದರು. ಮೈಸೂರಿನಲ್ಲಿ ಅಷ್ಟೇ ಅಲ್ಲದೇ, ನಾಡಿನ ಎಲ್ಲ ಭಾಗಗಳಲ್ಲಿ ಕೈಗಾರಿಕೆಗಳು ಇರಬೇಕು ಎನ್ನುವ ವಿಕೇಂದ್ರಿಕರಣದ ಉದ್ದೇಶವನ್ನು ಇಟ್ಟುಕೊಂಡಿದ್ದರು' ಎಂದು ಹಿರಿಯ ಸಾಹಿತಿ ಅಬ್ದುಲ್ ಬಶೀರ್ ಹೇಳಿದರು.







