ಉಕ್ರೇನ್ ಮೇಲೆ ಡರ್ಟಿ ಬಾಂಬ್ ದಾಳಿಗೆ ರಶ್ಯ ತಂತ್ರ?: ಉಕ್ರೇನ್ ಮೇಲೆಯೇ ಹೊಣೆ ಹೊರಿಸಲು ಸಂಚು; ನೇಟೋ ಆರೋಪ

ಮಾಸ್ಕೋ,ಅ.25: ಉಕ್ರೇನ್ ಸೇನೆಯು ‘‘ಡರ್ಟಿ ಬಾಂಬ್(Dirty bomb) ಗಳಿಂದ ದಾಳಿ ನಡೆಸಲು ಸಂಚು ಹೂಡಿದೆಯೆಂಬ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ರಶ್ಯವು ಸಂಘರ್ಷವನ್ನು ಉಲ್ಬಣಗೊಳಿಸಬಾರದೆಂದು ನೇಟೋ ಸೇನಾ(NATO Army) ಮೈತ್ರಿಕೂಟ ಮಂಗಳವಾರ ಎಚ್ಚರಿಸಿದೆ.
ಡರ್ಟಿಬಾಂಬ್ ನಂತಹ ಮಾರಕಾಸ್ತ್ರಗಳನ್ನು ರಶ್ಯವು ಯುದ್ಧದಲ್ಲಿ ಬಳಸಿ, ಆನಂತರ ಅದರ ದೂರನ್ನು ಉಕ್ರೇನ್ ಮೇಲೆ ಹೊರಿಸುವ ಸಾಧ್ಯತೆಯಿದೆಯೆಂದು ನೇಟೋ ವರಿಷ್ಠ ಜೆನ್ಸ್ ಸ್ಟೊಲ್ಟೆನ್ಬರ್ಗ್ ತಿಳಿಸಿದ್ದಾರೆ. ನೇಟೋ ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟವಾಗಿದೆ.
ತಾನಾಗಿಯೇ ಉಕ್ರೇನ್ ನೆಲದ ಮೇಲೆ ಡರ್ಟಿಬಾಂಬ್ ದಾಳಿ ನಡೆಸಲು ಉಕ್ರೇನ್ ಸೇನೆಯು ಸಂಚು ಹೂಡಿದೆಯೆಂಬ ರಶ್ಯವು ಸುಳ್ಳು ಆರೋಪ ಮಾಡುತ್ತಿರುವ ಬಗ್ಗೆ ತಾನು ಪೆಂಟಗಾನ್ ವರಿಷ್ಠ ಲಾಯ್ಡೆ ಆಸ್ಟಿನ್ ಹಾಗೂ ಬ್ರಿಟನ್ ನ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೆಸ್ ಜೊತೆ ಚರ್ಚಿಸಿರುವುದಾಗಿ ಸ್ಟೊಲೆನ್ಬರ್ಗ್ ಹೇಳಿದ್ದಾರೆ.
ಉಕ್ರೇನ್ ದೇಶವು ಡರ್ಟಿ ಬಾಂಬ್ ಗಳನ್ನು ಸೃಷ್ಟಿಸಲು ಉಕ್ರೇನ್ ನ ಎರಡು ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದೆರೆ. ಈ ಕಾರ್ಯವು ಈಗ ಅಂತಿಮ ಹಂತದಲ್ಲಿದೆ ಎಂದು ರಶ್ಯ ಸೇನೆಯ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೊವ್ ಆರೋಪಿಸಿದ್ದರು.
ಏನಿದು ಡರ್ಟಿ ಬಾಂಬ್
ಡರ್ಟಿ ಬಾಂಬ್ ಗಳನ್ನು ಸ್ಫೋಟಿಸುವ ಮೂಲಕ ಅಣುವಿಕಿರಣ ತ್ಯಾಜ್ಯಗಳನ್ನು ಚದುರಿಬಿಡಲಾಗುತ್ತದೆ. ಡರ್ಟಿ ಬಾಂಬ್ ಗಳು ಪರಮಾಣು ಬಾಂಬ್ ಗಳಷ್ಟು ವಿನಾಶಕಾರಿಯಲ್ಲದಿದ್ದರೂ, ಸಾವಿರಾರು ಕಿ.ಮೀ. ಪ್ರದೇಶವನ್ನು ರೇಡಿಯೋವಿಕಿರಣಗಳ ಮೂಲಕ ಮಲಿನಗೊಳಿಸಬಹುದಾಗಿದೆ. ಇದರಿಂದಾಗಿ ಆ ಪ್ರದೇಶದ ಜನರು ಭಯಾನಕವಾದ ರೋಗಗಳಿಗೆ ತುತ್ತಾಗುವ ಅಪಾಯವಿದೆ.







