ಉಕ್ರೇನ್ ಗೆ ಆಗಮಿಸಿದ ಜರ್ಮನ್ ಅಧ್ಯಕ್ಷ

ಕೀವ್,ಅ.12: ರಶ್ಯ ಆಕ್ರಮಣದ ಆರಂಭವಾದ ಆನಂತರ ಉಕ್ರೇನ್ ಗೆ ಇದೇ ಮೊದಲ ಬಾರಿಗೆ ಜರ್ಮನಿ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೇನ್ಮಿಯರ್(Frank Walter Steinmeier) ಮಂಗಳವಾರ ಭೇಟಿ ನೀಡಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ಗೆ ಆಗಮಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡ್ರೋನ್ಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ರಾಕೆಟ್ ದಾಳಿಗಳು ನಡೆಯುತ್ತಿರುವ ಈ ಹಂತದಲ್ಲಿ ಉಕ್ರೇನಿಯನ್ ಜನತೆಯೊಂದಿಗೆ ಏಕತೆಯ ಸಂದೇಶವನ್ನು ಸಾರುವುದು ನನಗೆ ಅತ್ಯಂತ ಮಹತ್ವದ್ದಾಗಿದೆ’’ ಎಂದು ಹೇಳಿರುವುದಾಗಿ ಜರ್ಮನ್ ಸುದ್ದಿ ಏಜೆನ್ಸಿ ಡಿಪಿಎ ವರದಿ ಮಾಡಿದೆ.
ಅಧ್ಯಕ್ಷ ಸ್ಟೆಯಿನ್ಮಿಯರ ಕೀವ್ ಭೇಟಿಯ ಛಾಯಾಚಿತ್ರವನ್ನು ಅವರ ವಕ್ತಾರರಾದ ಸೆರ್ಸ್ಟಿನ್ ಗ್ಯಾಮ್ಮೆಲಿನ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ‘‘ ಉಕ್ರೇನ್ ಜನತೆಯ ಜೊತೆಗಿನ ನಮ್ಮ ಏಕತೆ ಅಚಲವಾಗಲಿದೆ ಮತ್ತು ಅದು ಹಾಗೆಯೇ ಮುಂದುವರಿಯಲಿದೆ’’ ಎಂದು ಟ್ವೀಟಿಸಿದ್ದಾರೆ.
ಜರ್ಮನ್ ಅಧ್ಯಕ್ಷರು ಉಕ್ರೇನ್ಗೆ ಈ ಹಿಂದೆ ಎರಡು ಬಾರಿ ಭೇಟಿ ನೀಡಲು ಯತ್ನಿಸಿದ್ದರಾದರೂ ಅದು ಸಫಲವಾಗಿರಲಿಲ್ಲ. ಕಳೆದ ಎಪ್ರಿಲ್ನಲ್ಲಿ ಅವರು ಪೊಲ್ಯಾಂಡ್ ಹಾಗೂ ಬಾಲ್ಟಿಕ್ ಪ್ರಾಂತದ ರಾಷ್ಟ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಉಕ್ರೇನ್ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಆದರೆ ಅವರ ಉಕ್ರೇನ್ ಆಡಳಿತವು ಅವರ ಆಗಮನವನ್ನು ಬಯಸದೆ ಇದ್ದುದರಿಂದ ಪ್ರವಾಸವನ್ನು ಮುಂದೂಡಲಾಗಿತ್ತು. ಸ್ಟೆಯಿನ್ಮಿಯರ್ ಅವರು ಜರ್ಮನಿಯ ವಿದೇಶ ಸಚಿವರಾಗಿದ್ದ ಸಂದರ್ಭದಲ್ಲಿ ರಶ್ಯದ ಅತಿಯಾದ ಸ್ನೇಹ ಹೊಂದಿದ್ದರೆಂದು ಉಕ್ರೇನ್ನಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
ಕಳೆದ ವಾರ ಅವರು ಉಕ್ರೇನ್ ಭೇಟಿ ಹಮ್ಮಿಕೊಂಡಿದ್ದರಾದರೂ, ಆಗ ಕೂಡಾ ಭದ್ರತಾಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.







