ಕೆಂಪೇಗೌಡರ ಕಾರ್ಯಕ್ರಮದಲ್ಲಿ ‘ಟಿಪ್ಪು’ವನ್ನು ಎಳೆದು ತಂದ ನಳಿನ್ ಕುಮಾರ್ ಕಟೀಲ್
ಮಂಗಳೂರು: ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಪವಿತ್ರ ಮಣ್ಣು ಸಂಗ್ರಹ ಅಭಿಯಾನಕ್ಕೆ ನಗರದ ಲೇಡಿಹಿಲ್ ಬಳಿಯಿರುವ ಮನಪಾ ಈಜುಕೊಳದ ಆವರಣದಲ್ಲಿ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ‘ಟಿಪ್ಪು ಸುಲ್ತಾನ್’ ಅವರನ್ನು ಉಲ್ಲೇಖಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಿಸಿ ಅವರ ಹೆಸರಿಡಬೇಕೆಂದು ನಿರ್ಧರಿಸುವಾಗ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂಬ ಮಾತು ಕೇಳಿ ಬಂತು. ಆದರೆ ಕೆಂಪೇಗೌಡರ ಎದುರು ಯಾವ ಟಿಪ್ಪುವೂ ಅಲ್ಲ. ಬೆಂಗಳೂರು ಇಂದು ಜಗತ್ತಿನ ಅತ್ಯಂತ ಪ್ರಸಿದ್ಧ ನಗರವಾಗಿ ಬೆಳೆದಿದ್ದರೆ ಅದಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಿದೆ. ದೇಶದಲ್ಲಿ ಇಂದು ಬೆಂಗಳೂರು ಪ್ರಮುಖ ಐಟಿ ಕೇಂದ್ರವಾಗಿ ಬೆಳೆದಿರುವುದಕ್ಕೆ ಆ ಕಾಲದಲ್ಲಿ ಕೆಂಪೇಗೌಡರು ಮಾಡಿರುವ ಅಭಿವೃದ್ಧಿಯ ಮಂತ್ರವೇ ಕಾರಣ ಎಂದರು.
ಮಂಗಳೂರು ಹಾಗೂ ಕೊಡಗಿನಲ್ಲಿ ಟಿಪ್ಪುವಿನ ನಿರಂತರ ದಾಳಿಗಳ ಬಗ್ಗೆ ಸ್ಪಷ್ಟ ಉಲ್ಲೇಖಗಳಿದೆ. ಆತನ ನೆತ್ತರಕೆರೆ ವಿಚಾರ, ಚರ್ಚ್ಗಳ ಮೇಲಿನ ದಾಳಿ, ಮತಾಂತರ ಪ್ರಕ್ರಿಯೆಗಳು ಚರ್ಚೆಯಲ್ಲಿದೆ. ಆದರೆ ಕೆಂಪೇಗೌಡರು, ಒಡೆಯರ್ಗಳ ವಿಚಾರದಲ್ಲಿ ಎಲ್ಲೂ ವಿವಾದಗಳಿಲ್ಲ, ಸಂದೇಹ,ಅನುಮಾನಗಳಿಲ್ಲ. ಕೆಂಪೇಗೌಡರು ಸರ್ವ ಸಮಾಜ, ಸಮುದಾಯಗಳನ್ನು ಒಂದಾಗಿ ಬೆಂಗಳೂರನ್ನು ಕಟ್ಟಿದವರು. ಅಂತಹ ಶ್ರೇಷ್ಠ ಸಾಧಕರ ಸಾಧನೆಯ ಬಗ್ಗೆ ಶಾಶ್ವತವಾಗಿ ನೆನಪು ಮಾಡುವಂತಹ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿಕೊಂಡರು.
ಅಭಿಯಾನಕ್ಕೆ ಚಾಲನೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸುಸಜ್ಜಿತ ಪಟ್ಟಣ ಹೇಗಿರಬೇಕೆಂಬ ಕಲ್ಪನೆಯಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಪ್ರಗತಿಯ ವೇಗದಲ್ಲಿ ಬೆಂಗಳೂರು ಇಂದು ನೂರುಪಟ್ಟು ಬೆಳೆದಿದೆ. ಅಂತಹ ಬೆಂಗಳೂರು ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ ಎಂದರು.