ಯಕ್ಷಾಂಗಣ ಮಂಗಳೂರು ದಶಮಾನೋತ್ಸವ ಸಿದ್ಧತೆ: ನ.21ರಿಂದ ’ ಸಪ್ತ ವಿಜಯ ’ ಯಕ್ಷಗಾನ ತಾಳ ಮದ್ದಳೆ ಸಪ್ತಾಹ

ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ಹತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದಶಮಾನೋತ್ಸವಕ್ಕೆ ಸಜ್ಜಾಗಿದೆ’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.
ಇತ್ತೀಚೆಗೆ ಜರಗಿದ ಪೂರ್ವ ಸಿದ್ಧತಾ ಸಭೆಯಲ್ಲಿ ’ನವೆಂಬರ್ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಶಮಾನ ಸಂಭ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವುಗಳ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಹತ್ತನೇ ವರ್ಷದ ನುಡಿ ಹಬ್ಬ ’ಯಕ್ಷಗಾನ ತಾಳಮದ್ದಳೆ ಸಪ್ತಾಹ - ೨೦೨೨’ ನಡೆಯಲಿದೆ. ದಶಮಾನೋತ್ಸವದ ಅಂಗವಾಗಿ ’ಸಪ್ತ ವಿಜಯ’ ಪ್ರಸಂಗ ಸರಣಿಯನ್ನು ಸಂಯೋಜಿಸಲಾಗಿದೆ.
ಯಕ್ಷಾಂಗಣದ ವತಿಯಿಂದ ಯಕ್ಷಗಾನದ ಕಲಾಪೋಷಕರೊಬ್ಬರಿಗೆ ನೀಡುವ ’ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ಹಿರಿಯ ಕಲಾವಿದರಿಗೆ ಕೊಡ ಮಾಡುವ ’ಯಕ್ಷಾಂಗಣ ಗೌರವ ಪ್ರಶಸ್ತಿ’ಗೆ ಅರ್ಹರಾದ ಹಿರಿಯ ಸಾಧಕರನ್ನು ಆಯ್ಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.
ಸಭೆಯಲ್ಲಿ ಯಕ್ಷಾಂಗಣದ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷರಾದ ಬೆಟ್ಟಂಪಾಡಿ ಸುಂದರ ಶೆಟ್ಟಿ, ರವೀಂದ್ರ ರೈ ಹರೇಕಳ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಜೊತೆ ಕಾರ್ಯದರ್ಶಿ ಕೆ.ಲಕ್ಷ್ಮಿನಾರಾಯಣ ರೈ ಹರೇಕಳ, ನಿವೇದಿತಾ ಎನ್. ಶೆಟ್ಟಿ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು.







