ಡೇರಾ ಮುಖ್ಯಸ್ಥನ ಪೆರೋಲ್ ತಕ್ಷಣ ರದ್ದುಗೊಳಿಸಿ: ಹರ್ಯಾಣ ಸರ್ಕಾರಕ್ಕೆ ದಿಲ್ಲಿ ಮಹಿಳಾ ಆಯೋಗ ಮುಖ್ಯಸ್ಥೆಯ ಮನವಿ

ಹರ್ಯಾಣ : ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‍ಗೆ ನೀಡಲಾಗಿರುವ ಪೆರೋಲ್ ಅನ್ನು ತಕ್ಷಣ ರದ್ದುಗೊಳಿಸಬೇಕೆಂದು ಕೋರಿ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಅವರು ಹರ್ಯಾಣ ಸರಕಾರವನ್ನು ಆಗ್ರಹಿಸಿದ್ದಾರೆ.
"ಇಂತಹ ಅಪಾಯಕಾರಿ ವ್ಯಕ್ತಿಗೆ ಮತ್ತೆ ಮತ್ತೆ ಏಕೆ ಪೆರೋಲ್ ನೀಡುತ್ತಿದ್ದೀರಿ? ಪೆರೋಲ್ ಮೇಲಿರುವಾಗ ಆತ ಸತ್ಸಂಗ ನಡೆಸುವುದೇ ಅಲ್ಲದೆ ಆಧ್ಯಾತ್ಮಿಕ ಹಾಡುಗಳನ್ನೂ ಬಿಡುಗಡೆಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲ ಹರ್ಯಾಣ ಸರಕಾರದ ನಾಯಕರೂ ಆತನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಆತನ ಪೆರೋಲ್ ಅನ್ನು ತಕ್ಷಣ ರದ್ದುಗೊಳಿಸಬೇಕು" ಎಂದು ಮಳಿವಾಲ್ ಟ್ವೀಟ್ ಮಾಡಿದ್ದಾರೆ.
ಡೇರಾ ಸಚ್ಚಾ ಸೌದಾ ಮುಖ್ಯಸ್ಥನಿಗೆ ಪೆರೋಲ್ ಮಂಜೂರುಗೊಳಿಸುವಲ್ಲಿ ಹರ್ಯಾಣ ಸರಕಾರದ ಪಾತ್ರವಿಲ್ಲ ಎಂದು ಮುಖ್ಯಮಂತ್ರಿ ಮನೋಹರ್ ಖಟ್ಟರ್ ಸ್ಪಷ್ಟಪಡಿಸಿದ್ದಾರೆ.
"ಇದರಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ವ್ಯಕ್ತಿಗೆ ಜಾಮೀನು ಅಥವಾ ಪೆರೋಲ್ ನೀಡುವುದು ಕೋರ್ಟಿನ ಕೆಲಸ. ಯಾರಿಗೆ ಪೆರೋಲ್ ನೀಡಬೇಕೆಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಈ ಕುರಿತು ನಾನೇನೂ ಹೇಳಲು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ.
ನವೆಂಬರ್ 3 ರಂದು ಆದಂಪುರ್ ಉಪಚುನಾವಣೆ ಹಾಗೂ ನವೆಂಬರ್ 12 ರಂದು ಹರ್ಯಾಣ ಪಂಚಾಯತ್ ಚುನಾವಣೆ ನಡೆಯಲಿದ್ದರೆ ಅದಕ್ಕಿಂತ ಕೆಲವೇ ದಿನಗಳಿಗೆ ಮುನ್ನ ಡೇರಾ ಮುಖ್ಯಸ್ಥನಿಗೆ 40 ದಿನಗಳ ಪೆರೋಲ್ ನೀಡಲಾಗಿದೆ. ಈ ವರ್ಷ ಆತನಿಗೆ ಪೆರೋಲ್ ದೊರಕುತ್ತಿರುವುದು ಇದು ಮೂರನೇ ಬಾರಿಯಾಗಿದೆ.







