ಅ. 29ರಂದು ರಾಜ್ಯ ಮಟ್ಟದ ‘ಕುಣಿತ’ ಜಾನಪದ ಸ್ಪರ್ಧೆ

ಮಂಗಳೂರು, ಅ.27: ಅವಿನಾಶ್ ಪೋಕ್ ಡ್ಯಾನ್ಸ್ ಮಂಗಳೂರು ವತಿಯಿಂದ ಅ. 29ರಂದು ರಾಜ್ಯ ಮಟ್ಟದ ಕುಣಿತ ಜಾನಪದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಸ್ಪರ್ಧೆಯ ಸಂಘಟಕರಾದ ವಿಜೆ ಪ್ರತೀಶ್ ಗೌರೀಶ್ ಮಾಹಿತಿ ನೀಡಿದರು.
ನಗರದ ಉರ್ವಾಸ್ಟೋರ್‌ನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಾನಪದ ಸಮೂಹ ನೃತ್ಯ, ಜಾನಪದ ಸಮೂಹ ಗೀತೆ, ಚರ್ಮವಾದ್ಯ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆಯಲಿವೆ.
ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸ್ಪರ್ಧೆಗಳು ನಡೆಯಲಿದ್ದು, ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸುವರು ಎಂದು ಅವರು ಹೇಳಿದರು.
ನಮ್ಮ ಮಣ್ಣಿನ ಕಲೆಯಾದ ಕುಣಿತ ಮತ್ತು ಜನಪದ ಮೂಲಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡಗಳು ಹೆಸರನ್ನು ನೋಂದಾಯಿಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು.
ಬೆಳಗ್ಗೆ ಚಿತ್ರಕಲಾ ಸ್ಪರ್ಧೆ, ಚರ್ಮವಾದ್ಯ ಸ್ಪರ್ಧೆ, ಜನಪದ ಸಮೂಹ ಗೀತೆಗಳು ನಡೆಯಲಿವೆ. ಪ್ರತಿ ವಿಭಾಗದಲ್ಲೂ ತಲಾ 30 ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ. ಜನಪದ ನೃತ್ಯದ ವಿಜೇತರಿಗೆ ಪ್ರಥಮ ಬಹುಮಾನವಾಗಿ 30,000 ರೂ., ದ್ವಿತೀಯ 20000 ಹಾಗೂ ತೃತೀಯ 10000 ರೂ. ನಗದು ಬಹುಮಾನ ನೀಡಲಾಗುವುದು. ತಂಡದಲ್ಲಿ 10 ಜನ ನೃತ್ಯಗಾರರು 5 ಜನ ಹಿಮ್ಮೇಳದವರೊಂದಿಗೆ 8 ನಿಮಿಷಗಳ ಕಾಲಾವಕಾಶವಿದೆ. 15 ವರ್ಷದಿಂದ 40 ವರ್ಷದವರೆಗೆ ನೃತ್ಯ ವಿಭಾಗದಲ್ಲಿ ಭಾಗವಹಿಸಬಹುದಾಗಿದೆ. ಸಿಡಿ ಹಾಡಿಗೆ ಅವಕಾಶ ಇರುವುದಿಲ್ಲ. ಕುಣಿತಕ್ಕೆ ಹೆಚ್ಚಿನ ಪ್ರೋತ್ಸಾಹವಿದ್ದು, ಹಿನ್ನೆಲೆಯನ್ನು ಮುಂಚಿತವಾಗಿ ತೀರ್ಪುಗಾರರಿಗೆ ತಿಳಿಸಬೇಕಾಗುತ್ತದೆ.
ಜನಪದ ಸಮೂಹ ಗೀತೆ, ಚಿತ್ರಕಲಾ ಸ್ಪರ್ಧೆ ಹಾಗೂ ಚರ್ಮವಾದ್ಯ ಸ್ಪರ್ಧೆಯ ವಿಜೇತರಿಗೆ ಪ್ರಥಮ ತಲಾ 10,000 ರೂ., ದ್ವಿತೀಯ 7000 ರೂ. ಹಾಗೂ ತೃತೀಯ 5000 ರೂ. ಬಹುಮಾನ ನೀಡಲಾಗುವುದು. ಸಮೂಹ ಗೀತೆಯಲ್ಲಿ ಸಿನೆಮಾ ಹಾಡಿಗೆ ಅವಕಾಶ ಇರುವುದಿಲ್ಲ. ಭಾಗವಹಿಸುವ ಸ್ಪರ್ಧಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಯಾವುದೇ ಪ್ರವೇಶ ದರ ಇರುವುದಿಲ್ಲ. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಪೇಪರ್ ಹೊರತುಪಡಿಸಿ ಉಳಿದೆಲ್ಲಾ ಪರಿಕರಗಳನ್ನು ತಾವೇ ತರಬೇಕಾಗುತ್ತದೆ ಎಂದು ಪ್ರತೀಶ್ ಗೌರೀಶ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಅವಿನಾಶ್, ಜಗದೀಶ್, ತಾರನಾಥ್ ಉರ್ವ ಉಪಸ್ಥಿತರಿದ್ದರು.