ಅ.31-ನ.1: ಮಂಗಳೂರಿನಲ್ಲಿ ಬೀಡಿ ಕಾರ್ಮಿಕರ ಸಮ್ಮೇಳನ

ಮಂಗಳೂರು, ಅ.27:ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು)ನ 10ನೆ ರಾಜ್ಯ ಸಮ್ಮೇಳನವು ಅ.31 ಮತ್ತು ನವೆಂಬರ್ 1ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ವಸಂತ ಆಚಾರಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಯಿಂದಾಗಿ ಬೀಡಿ ಕೈಗಾರಿಕೆ ನಲುಗಿವೆ. ಆರೋಗ್ಯದ ಹೆಸರಿನಲ್ಲಿ ನಿರಂತರ ದಾಳಿಗಳಾಗಿವೆ. ಕೊಟ್ಪಾ ಕಾಯ್ದೆಯನ್ನು ಕಠಿಣಗೊಳಿಸಿ ಬೀಡಿ ಸೇದುವವರಿಗೆ, ಬೀಡಿ ಕೈಗಾರಿಕೋದ್ಯಮಿಗಳಿಗೆ, ಬೀಡಿ ಕಾರ್ಮಿಕರಿಗೆ ತೊಂದರೆ ನೀಡಿವೆ. ವಾರಪೂರ್ತಿ ಕೆಲಸವಿಲ್ಲದೆ ಬೀಡಿ ಕಾರ್ಮಿಕರು ಜೀವನ ನಡೆಸುವುದು ಅಸಾಧ್ಯವಾಗಿದೆ. ಬೀಡಿಯ ಮೇಲೆ ಜಿಎಸ್‌ಟಿ ಹೇರಿರುವುದರಿಂದ ಕಲ್ಯಾಣ ಮಂಡಳಿಯಿಂದ ಬೀಡಿ ಕಾರ್ಮಿಕರಿಗೆ ಸ್ಕಾಲರ್‌ಶಿಪ್ ಸರಿಯಾಗಿ ಸಿಗುತ್ತಿಲ್ಲ, ಮನೆಕಟ್ಟಲು ಕೂಡ ಸಹಾಯಧನ ಇಲ್ಲವಾಗಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಿ ಹೋರಾಟ ರೂಪಿಸಲಾಗುವುದು ಎಂದರು.
ಅ.31ರ ಬೆಳಗ್ಗೆ 10ಕ್ಕೆ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಸಮ್ಮೇಳನವನ್ನು ಅಖಿಲ ಭಾರತ ಬೀಡಿ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ದೇಬಸಿಶ್ ರಾಯ್ ಉದ್ಘಾಟಿಸಲಿದ್ದಾರೆ. ಫೆಡರೇಶನ್‌ನ ರಾಜ್ಯಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನ.1ರಂದು ಬೆಳಗ್ಗೆ 10ಕ್ಕೆ ಬೋಳಾರದ ಸಿಐಟಿಯು ಸಭಾಂಗಣದಲ್ಲಿ ಸಮ್ಮೇಳನದ ಕಲಾಪಗಳು ನಡೆಯಲಿದೆ. ಬೀಡಿ ಕಾರ್ಮಿಕರ ಕಾನೂನು ಸೌಲಭ್ಯಗಳಿಗಾಗಿ ಹೋರಾಟ ನಡೆಸಿದ ಕಾರ್ಮಿಕ ಚಳುವಳಿಯ ಹಿರಿಯ ನಾಯಕ ಯು.ಬಿ.ಲೋಕಯ್ಯರ ಜೀವನ ಕಥನದ ಬಗ್ಗೆ ಬಾಬು ಪಿಲಾರ್ ಬರೆದಿರುವ ಪುಸ್ತಕವನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಸಂತ ಆಚಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆ. ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಪದ್ಮಾವತಿ ಎಸ್. ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.







