ಮಂಗಳೂರು: ಆವರಣ ಗೋಡೆ ಕುಸಿದು ಕಾರ್ಮಿಕ ಮೃತ್ಯು

ಮಂಗಳೂರು : ನಗರದ ಉರ್ವ ಸಮೀಪದ ಲೇಔಟ್‌ನ ಮನೆಯೊಂದರ ಮುಂಭಾಗದ ಆವರಣ ಗೋಡೆ ಕುಸಿದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮೃತಪಟ್ಟ ಕಾರ್ಮಿಕನನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಈರಪ್ಪ ಎಂದು ಗುರುತಿಸಲಾಗಿದೆ.
ಉರ್ವದ ಬಿ. ನಾರಾಯಣ ನಾಯಕ್ ಎಂಬವರ ಮನೆಯ ಮುಂದೆ ಕಳೆದೊಂದು ವಾರದಿಂದ ಮಂಗಳೂರು ಮನಪಾ ವತಿಯಿಂದ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎನ್ನಲಾಗಿದೆ. ಕಾಮಗಾರಿಯಿಂದಾಗಿ ಆವರಣ ಗೋಡೆ ಕುಸಿಯುವ ಸಾಧ್ಯತೆ ಇದೆ ಎಂದು ನಾರಾಯಣ ನಾಯಕ್‌ರು ಗುತ್ತಿಗೆದಾರ ಹರಿಪ್ರಸಾದ್ ಬಳಿ ಹೇಳಿಕೊಂಡಿದ್ದರೂ ಕೂಡ ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಗುರುವಾರ ಬೆಳಗ್ಗೆ ಐವರು ಕಾರ್ಮಿಕರು ನಾರಾಯಣ ನಾಯಕ್‌ರ ಮನೆಯ ಮುಂದೆ ಕೆಲಸ ಮಾಡುತ್ತಿದ್ದು, ಈ ಸಂದರ್ಭ ಈರಪ್ಪ ಎಂಬವರ ಮೇಲೆ ಆವರಣ ಗೋಡೆ ಕುಸಿದು ಬಿತ್ತೆನ್ನಲಾಗಿದೆ. ಪರಿಣಾಮ ಈರಪ್ಪ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಟೋ ರಿಕ್ಷಾವೊಂದರಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆಯೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಈ ಬಗ್ಗೆ ನಾರಾಯಣ ನಾಯಕ್ ನೀಡಿದ ದೂರಿನಂತೆ ಆರೋಪಿ ಗುತ್ತಿಗೆದಾರ ಹರಿಪ್ರಸಾದ್ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







