ಜಮ್ಮುಕಾಶ್ಮೀರದ ಬಗ್ಗೆ ಪಾಶ್ಚಿಮಾತ್ಯ ಮಾಧ್ಯಮಗಳಿಂದ ತಪ್ಪು ಮಾಹಿತಿ: ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
ಶ್ರೀನಗರ, ಅ. 27: ಜಮ್ಮು ಹಾಗೂ ಕಾಶ್ಮೀರದ ಬಗ್ಗೆ ತಪ್ಪು ಮಾಹಿತಿ ಹರಡಲು ಪಾಶ್ಚಿಮಾತ್ಯ ಮಾಧ್ಯಮದ ದೊಡ್ಡ ವರ್ಗ ಕಾರಣವಾಗಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಅವರು ಬುಧವಾರ ಹೇಳಿದ್ದಾರೆ.
‘‘ಅವರು (ಪಾಶ್ಚಿಮಾತ್ಯ) ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ, ಈ ತಪ್ಪು ಮಾಹಿತಿ ಹರಡುವುದರಲ್ಲಿ ಅವರ ಕೊಡುಗೆ ಪಾಕಿಸ್ತಾನಕ್ಕಿಂತ ದೊಡ್ಡದಾಗಿದೆ’’ ಎಂದು ಸಿನ್ಹಾ ಹೇಳಿದರು. ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸುವುದನ್ನು ಅವರು ತಳ್ಳಿ ಹಾಕಿದರು.
ಹೊಸದಿಲ್ಲಿಯಲ್ಲಿ ಬಿಜೆಪಿ ನಾಯಕ ಶೇಖ್ ಖಾಲಿದ್ ಜಹಾಂಗೀರ್ ಅವರ ‘ದಿ ಟು ಕಾಶ್ಮೀರಿಸ್’ (The two Kashmiris) ಕೃತಿಯನ್ನು ಬಿಡುಗಡೆ ಮಾಡಿ ಸಿನ್ಹಾ ಅವರು ಮಾತನಾಡಿದರು.
‘‘ನಾವು ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವ ವರೆಗೆ ಕಾಶ್ಮೀರದಲ್ಲಿ ಯಾವುದೂ ಸರಿ ಇರದಂತೆ ಕೆಲವರು ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ಹೇಳಿದರು. ‘‘ಇವರು ಕಾಶ್ಮೀರವನ್ನು ಈ ಹಂತಕ್ಕೆ ತಂದವರು. ಇವರು ಭಯೋತ್ಪಾದಕರೊಂದಿಗೆ ನೇರ ಸಂಪರ್ಕ ಹೊಂದಿದವರಿಗಿಂತ ಅಪಾಯಕಾರಿ. ಕಣಿವೆಯಲ್ಲಿ ಒಂದು ನಿರ್ದಿಷ್ಟ ಮಟ್ಟದ ಹಿಂಸಾಚಾರವನ್ನು ಕಾಯ್ದುಕೊಳ್ಳುವ ವರೆಗೆ ಕೇಂದ್ರ ಸರಕಾರ ತಮ್ಮನ್ನು ಗೌರವಿಸುವುದಿಲ್ಲ ಎಂದು ಈ ಜನರು ಭಾವಿಸಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
ಕಾಶ್ಮೀರಿಗಳು ಉದ್ಯೋಗಾವಕಾಶಗಳಿಗಾಗಿ ಇಲ್ಲಿಂದ ಹೊರ ಹೋಗುವ ಅಗತ್ಯತೆ ಇದೆ ಎಂದು ಅವರು ಹೇಳಿದರು. ‘‘ಕಾಶ್ಮೀರಿಗಳಲ್ಲಿ ವಿಚಿತ್ರ ಸಾಮಾಜಿಕ ಸಮಸ್ಯೆ ಇದೆ. ಅವರು ಕಾಶ್ಮೀರದಿಂದ ಹೊರ ಹೋಗಲು ಇಷ್ಟಪಡುವುದಿಲ್ಲ’’ ಎಂದು ಅವರು ಹೇಳಿದರು.