ಅ. 30ರಂದು ಬೈಂದೂರಿನಲ್ಲಿ ಬೃಹತ್ ಉದ್ಯೋಗ ಮೇಳ
► 30ಕ್ಕೂ ಅಧಿಕ ಕಂಪೆನಿಗಳು ► 3500 ಮಂದಿಗೆ ಉದ್ಯೋಗದ ನಿರೀಕ್ಷೆ

ಉಡುಪಿ, ಅ.27: ಬೈಂದೂರಿನ ಸಮಾಜ ಸೇವಕ, ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಬೈಂದೂರು ತಾಲೂಕಿನ ಉಪ್ಪುಂದದ ಕೆರ್ಗಾಲ್ ನಂದನವನ ಹಾಸ್ಪಿಟಾಲಿಟಿ ಮತ್ತು ಸರ್ವಿಸಸ್ ಹೊಟೇಲ್‌ನಲ್ಲಿ ಎಸ್‌ವಿಸಿಟಿ ಮೆಗಾ ಉದ್ಯೋಗ ಮೇಳ ಅ.30ರಂದು ಆಯೋಜನೆಗೊಂಡಿದೆ.
ಉಪ್ಪುಂದದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ನಂದನವನ ಹೊಟೇಲ್‌ನ ಪ್ರಜ್ಞಾ ಸಾಗರ್ ಹಾಲ್‌ನಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ಪಿಯುಸಿ ಉತ್ತೀರ್ಣರಾದವರು, ಪದವಿ, ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವವರು ಈ ಮೇಳದಲ್ಲಿ ಭಾಗವಹಿಸಬಹುದು ಎಂದು ಡಾ.ಗೋವಿಂದ ಬಾಬು ಪೂಜಾರಿ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ ಹಲವು ಪ್ರತಿಷ್ಠಿತ ಕಂಪೆನಿಗಳು ಸೇರಿದಂತೆ 32ಕ್ಕೂ ಅಧಿಕ ಕಂಪೆನಿಗಳು ಇದರಲ್ಲಿ ಭಾಗವಹಿಸಲಿದ್ದು, 3,500ಕ್ಕೂ ಅಧಿಕ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕನಿಷ್ಠ 2500ಯಿಂದ ಮೂರು ಸಾವಿರ ಮಂದಿಗೆ ಇಲ್ಲಿ ಉದ್ಯೋಗ ಸಿಗುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ ಎಂದು ವಿವರಿಸಿದರು.
ಇನ್‌ಫೋಸಿಸ್, ವಿಸ್ಟನ್, ಐಬಿಎಂ, ಅಮೆಝಾನ್, ಟೊಯೋಟಾ, ಎಚ್‌ಡಿಎಫ್‌ಸಿ, ಎಲ್‌ಜಿ, ಎಲ್‌ಜಿ ಇಲೆಕ್ಟ್ರಾನಿಕ್ಸ್, ರಿಲಾಯನ್ಸ್, ವಿನ್‌ಸ್ಟ್ರಾ ಮುಂತಾದ 30ಕ್ಕೂ ಅಧಿಕ ಖ್ಯಾತನಾಮ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ಈಗಾಗಲೇ 2412 ಮಂದಿ ಅಭ್ಯರ್ಥಿ ಗಳು ಆನ್‌ಲೈನ್‌ನಲ್ಲಿ ಹೆಸರು ನೊಂದಾಯಿಸಿ ಕೊಂಡಿದ್ದಾರೆ ಎಂದರು.
ಉದ್ಯೋಗ ಮೇಳದಲ್ಲಿ 100ರಿಂದ 150 ಮಂದಿ ಅರ್ಹ ಮಹಿಳೆಯರಿಗೆ ವರ್ಕ್‌ಫ್ರಾಮ್ ಹೋಮ್ ಆಧಾರದಲ್ಲಿ ಉದ್ಯೋಗ ನೀಡುವಂತೆ ನೀಡಿದ ಸಲಹೆಯನ್ನು ಕಂಪೆನಿಗಳು ಒಪ್ಪಿಕೊಂಡಿವೆ. ಇವರು ಮನೆಯಲ್ಲೇ ಕುಳಿತು ಕೆಲಸ ಮಾಡಲು ಅವಕಾಶವಿರುತ್ತದೆ.
ಹೆಸರು ನೊಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಅ.28 ಮತ್ತು 29ರಂದು ಬೆಳಗ್ಗೆ 9:30ರಿಂದ 11:30ರವರೆಗೆ ನಂದನವನ ಹೊಟೇಲ್‌ನ ಪರಿಚಯ ಹಾಲ್‌ನಲ್ಲಿ ಸಂದರ್ಶನ ಎದುರಿಸುವ ಬಗ್ಗೆ ತರಬೇತಿಯನ್ನು ನೀಡಲಾಗುವುದು. ತಜ್ಞರು ಈ ಬಗ್ಗೆ ಎಲ್ಲಾ ಮಾಹಿತಿಗಳನ್ನು ನೀಡಲಿದ್ದಾರೆ ಎಂದರು.
ನಾಡಿನ ಖ್ಯಾತ ಉದ್ಯಮಿಯಾಗಿರುವ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರು ಎಳು ವರ್ಷಗಳ ಹಿಂದೆ ಟ್ರಸ್ಟ್‌ನ್ನು ಸ್ಥಾಪಿಸಿದ್ದು, ಇದರ ಮೂಲಕ ತನ್ನ ಹುಟ್ಟೂರಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುತಿದ್ದಾರೆ. ಕೊರೋನ ಸಮಯದಲ್ಲಿ ಅಗತ್ಯವಿರುವವರಿಗೆ ಕೊರೋನಾ ಕಿಟ್‌ಗಳ ಜೊತೆಗೆ ಆಹಾರ, ಔಷಧಿಗಳನ್ನು ಸಹ ವಿತರಿಸಿದ್ದಾರೆ. ಅಲ್ಲದೇ ಟ್ರಸ್ಟ್‌ನಿಂದ ಈಗಾಗಲೇ ಬಡವರಿಗೆ 9 ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇನ್ನು ಐದು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಸುರಭಿ ಬೈಂದೂರಿನ ನಾಗರಾಜ್ ಬೈಂದೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ಜ್ಞಾನಜ್ಯೋತಿ ಅಕಾಡೆಮಿಯ ಸತ್ಯನಾರಾಯಣ ಗಾಣಿಗ ಉಪಸ್ಥಿತರಿದ್ದರು.







