'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ' ತಿದ್ದುಪಡಿ ಶಿಫಾರಸ್ಸು ಸರಕಾರಕ್ಕೆ ಸಲ್ಲಿಕೆ: ಡಾ.ಮಹೇಶ ಜೋಶಿ

ಬೆಂಗಳೂರು, ಅ.27: “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022” ಕುರಿತು ನ್ಯಾಯಮೂರ್ತಿಗಳು, ಸಾಹಿತಿಗಳು ಹಾಗೂ ವಿವಿಧ ಗಣ್ಯರೊಂದಿಗೆ ಕಸಾಪದಲ್ಲಿ ನಡೆದ ಚಿಂತನಾ ಗೋಷ್ಠಿಯಲ್ಲಿ ಸರ್ವಾನುಮತದಿಂದ ಸ್ವೀಕರಿಸಿದ ಸಲಹೆ-ಸೂಚನೆಗಳನ್ನು ಪರಿಶೀಲಿಸಿ ವಿಧೇಯಕದ ತಿದ್ದುಪಡಿಗಾಗಿ ಮಾಡಲಾದ ಶಿಫಾರಸ್ಸನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯಮಂತ್ರಿಗಳಿಗೆ ಕಳಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಗುರುವಾರ ಡಾ.ಮಹೇಶ್ ಜೋಶಿ ಅವರು ಪ್ರಕಟಣೆ ಹೊರಡಿಸಿದ್ದಾರೆ. ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗಿರುವ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022”ದ ಬಗ್ಗೆ ಅ.12ರ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಚಿಂತನಾ ಗೋಷ್ಠಿಯಲ್ಲಿ ದಿನ ಪೂರ್ತಿ ಗಂಭಿರ ಚರ್ಚೆ ನಡೆಸಲಾಗಿ ಕೆಲವು ಸಲಹೆಗಳು ಒಕ್ಕೊರಲ ಅಭಿಪ್ರಾಯದಲ್ಲಿ ವ್ಯಕ್ತವಾಗಿತ್ತು.
ಕನ್ನಡಪರ ಮಠಾಧೀಶರುಗಳಾದ ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲ ಸಾಮೀಜಿಗಳು, ಬೇಲಿಮಠದ ಶ್ರೀಶಿವರುದ್ರ ಸಾಮೀಜಿಗಳು, ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ, ಸಚಿವ ಜೆ.ಸಿ. ಮಾಧುಸ್ವಾಮಿ, ಹೈಕೋರ್ಟ್ ವಿಶ್ರಾಂತ ನ್ಯಾ.ಅರಳಿ ನಾಗರಾಜ್ ಅವರುಗಳು ಸೇರಿದಂತೆ 40ಕ್ಕೂ ಅಧಿಕ ಗಣ್ಯರು ಈ ಚಿಂತನಾಗೋಷ್ಠಿಯಲ್ಲಿ ಭಾಗವಹಿಸಿದ್ದರು ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಕನ್ನಡಪರ ಚಿಂತಕ ರಾ.ನಂ. ಚಂದ್ರಶೇಖರ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮೊದಲಾದ ಗಣ್ಯರು ಅನಿವಾರ್ಯ ಕಾರಣಗಳಿಂದಾಗಿ ಈ ಚಿಂತನಾ ಗೋಷ್ಠಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ, ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಪರಿಷತ್ತಿಗೆ ಸಲ್ಲಿಸಿದ್ದಾರೆ. ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದ ಗಣ್ಯರು, ತಜ್ಞರು ಏಕಧ್ವನಿಯಲ್ಲಿ ಕೊಟ್ಟ ಸಲಹೆ-ಸೂಚನೆಗಳನ್ನು ಹಾಗೂ ಲಿಖಿತ ರೂಪದಲ್ಲಿ ಬಂದಂತಹ ಅಭಿಪ್ರಾಯಗಳನ್ನು ಪರಿಗಣಿಸಿ, ಪರಿಶೀಲಿಸಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022” ಕ್ಕೆ ಸೂಕ್ತ ಪರಿಷ್ಕರಣೆಗಳನ್ನು ಮಾಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.







