ಬೆಂಗಳೂರು | ಸಂಘಪರಿವಾರದ ವಿರೋಧ: ಸ್ಥಳ ಬದಲಿಸಿ ‘ಇಮ್ರಾನ್ ಖಾನ್’ ಪುಸ್ತಕ ಬಿಡುಗಡೆ

ಬೆಂಗಳೂರು, ಅ.27: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತ ‘ಇಮ್ರಾನ್ ಖಾನ್ ಒಂದು ಜೀವಂತ ದಂತ ಕತೆ' ಪುಸ್ತಕ ಬಿಡುಗಡೆಗೆ ಸಂಘಪರಿವಾರದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಬೇರೆಡೆ ಸ್ಥಳ ಬದಲಾಯಿಸಿ ಕಾರ್ಯಕ್ರಮವನ್ನು ಜರುಗಿಸಲಾಯಿತು.
ಗುರುವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಮಥ ಪ್ರಕಾಶನ ಸಹಯೋಗದೊಂದಿಗೆ ಲೇಖಕ ಸುಧಾಕರ ಎಸ್.ಬಿ. ಬರೆದಿರುವ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕತೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಸಂಜೆ ಏರ್ಪಡಿಸಲಾಗಿತ್ತು. ಆದರೆ, ಸಂಘ ಪರಿವಾರದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.
ಬಳಿಕ ಆಯೋಜಕರು, ಇಲ್ಲಿನ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಬಳಿಯ ಡಿ ಗ್ರೂಪ್ ಬಡಾವಣೆಯ ಮನೆವೊಂದರಲ್ಲಿ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಮಾಜಿ ಸಚಿವೆ ಆರ್.ಲೀಲಾದೇವಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು ಎಂದು ಸಾಹಿತಿ ಡಾ.ವಡ್ಡಗೆರೆ ನಾಜರಾಜಯ್ಯ ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಸಂಘ ಪರಿವಾರದ ಕಾರ್ಯಕರ್ತರು ಈ ಪುಸ್ತಕ ಬಿಡುಗಡೆ ಮಾಡಬಾರದೆಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿ, ಹೊರಗಡೆ ಮಾಹಿತಿ ಫಲಕ ಅಂಟಿಸಿದರು. ಬಳಿಕ ಬೇರೆಡೆ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.
ಇನ್ನೂ, ಹಿಂದೂ ಜನಜಾಗೃತಿ ಸಮಿತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಕರ ವಿರುದ್ಧ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.









