ಅ.29ರಂದು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ತಿರಂಗ ರ‍್ಯಾಲಿ

ಉಡುಪಿ : ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವ ದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಬೃಹತ್ ತಿರಂಗ ಬೈಕ್ ಜಾಥಾ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೈಕ್ ಜಾಥಾವು ಜಿಲ್ಲಾ ಗಡಿ ಭಾಗವಾದ ಬೈಂದೂರಿನಿಂದ ಆರಂಭಗೊಂಡು ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಪಡುಬಿದ್ರೆ, ಇನ್ನಾ, ಬೆಳ್ಮಣ್, ನಿಟ್ಟೆ ಮಾರ್ಗವಾಗಿ ಕಾರ್ಕಳಕ್ಕೆ ಸಾಗಲಿದ್ದು, ಕಾರ್ಕಳದ ಬಂಡಿಮಠದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಬಹಿರಂಗ ಸಭೆಯಲ್ಲಿ ಎಂ.ವೀರಪ್ಪ ಮೊಯ್ಲಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣ ಅಲ್ಲವಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಬೈಕ್ ಜಾಥಾದಲ್ಲಿ ಜಿಲ್ಲೆಯ 10 ಬ್ಲಾಕ್‌ಗಳ ಸುಮಾರು 5ರಿಂದ 6 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಪಿನ್‌ಚಂದ್ರ ಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಭಾಕರ ಬಂಗೇರ, ಹಮೀದ್ ಹುಸೇನ್, ಸೌರಭ್ ಬಲ್ಲಾಳ್, ಯೋಗೀಶ್ ಆಚಾರ್ಯ, ಗುರು ಪ್ರಸಾದ್ ಶೆಟ್ಟಿ, ಶಬರೀಸ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.







