ಬಿಜೆಪಿ ಸೇರುವಂತೆ ಟಿಆರ್‌ಎಸ್ ಶಾಸಕರಿಗೆ ಆಮಿಷ ಒಡ್ಡಿದ ಮೂವರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್, ಅ. 27: ಬಿಜೆಪಿ ಸೇರುವಂತೆ ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರಿಗೆ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಮೂವರ ವಿರುದ್ಧ ಸೈಬರಾಬಾದ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂತ ಡಿ. ಸಿಮ್ಹಯಾಜಿ, ಅವರ ಅನುಯಾಯಿ ಸತೀಶ್ ಶರ್ಮಾ ಹಾಗೂ ಉದ್ಯಮಿ ನಂದಕುಮಾರ್ ಅವರ ವಿರುದ್ಧ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಮೂವರನ್ನು ಕೂಡ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪಿ. ರೋಹಿತ್ ರೆಡ್ಡಿ, ಭೀರಂ ಹರ್ಷವರ್ಧನ್ ರೆಡ್ಡಿ, ಪಿ. ರೇಗಾ ಕಾಂತ ರಾವ್, ಗುವ್ವಾಲ ಬಾಲರಾಜು- ಈ ನಾಲ್ವರು ಶಾಸಕರು ಸೈಬರಾಬಾದ್‌ನ ಅಝೀಝ್ ನಗರ್ ಪ್ರದೇಶದಲ್ಲಿರುವ ತೋಟದ ಮನೆಯಲ್ಲಿ ಕಂಡು ಬಂದಿದ್ದರು.
ಬಿಜೆಪಿ ಸೇರಲು ತಮಗೆ ಹಣದ ಆಮಿಷ ಒಡ್ಡಲಾಗಿದೆ ಎಂದು ನಾಲ್ವರು ಶಾಸಕರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ ಅವರು ತಿಳಿಸಿದ್ದಾರೆ. ‘‘ಅವರ ದೂರಿನ ಆಧಾರದಲ್ಲಿ ನಾವು ತೋಟದ ಮನೆಗೆ ತೆರಳಿದೆವು. ಅಲ್ಲಿ ಹಿಮಾಚಲಪ್ರದೇಶದ ಹಿಂದೂ ಸಂತ, ತಿರುಪತಿಯ ಅವರ ಅನುಯಾಯಿ ಹಾಗೂ ಹೈದರಾಬಾದ್ ಮೂಲದ ಉದ್ಯಮಿ ಕಂಡು ಬಂದರು’’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸೇರಿದರೆ ಹಣ, ಗುತ್ತಿಗೆ ಹಾಗೂ ಹುದ್ದೆ ನೀಡಲಾಗುವುದು ಎಂದು ಶಾಸಕರಿಗೆ ಆಮಿಷ ಒಡ್ಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಓರ್ವನಾಗಿರುವ ನಂದಕುಮಾರ್ ಕೇಂದ್ರ ಸಚಿವ ಜಿ. ಕೃಷ್ಣ ರೆಡ್ಡಿಗೆ ನಿಕಟವರ್ತಿ ಎಂದು ತೆಲಂಗಾಣ ರಾಷ್ಟ್ರ ಸಮಿತಿಯ ಸಾಮಾಜಿಕ ಮಾಧ್ಯಮದ ಸಂಚಾಲಕ ವೈ ಸತೀಶ್ ರೆಡ್ಡಿ ಪ್ರತಿಪಾದಿಸಿದ್ದಾರೆ.
ತೋಟದ ಮನೆಯ ಮಾಲಕ ಪಿ. ರೋಹಿತ್ ರೆಡ್ಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ತಾನು ಬಿಜೆಪಿ ಸೇರಿದರೆ ಹಾಗೂ ಇತರ ಶಾಸಕರನ್ನು ಬಿಜೆಪಿಗೆ ಸೇರಿಸಿದರೆ 100 ಕೋ.ರೂ. ನೀಡಲಾಗುವುದು ಎಂದು ಆಮಿಷ ಒಡ್ಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇತರ ಕೆಲವು ಶಾಸಕರನ್ನು ಬಿಜೆಪಿಗೆ ಸೇರಿಸುವಂತೆ ಕೂಡ ತಿಳಿಸಲಾಗಿತ್ತು. ಅದಕ್ಕಾಗಿ ಪ್ರತಿ ಶಾಸಕನಿಗೆ 50 ಲಕ್ಷ ರೂ. ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಶಾಸಕರು ಬಿಜೆಪಿಗೆ ಸೇರದೇ ಇದ್ದರೆ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯಿಂದ ದಾಳಿ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು ಎಂದು ರೋಹಿತ್ ರೆಡ್ಡಿ ತಿಳಿಸಿದ್ದಾರೆ.







