ಮಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡಿದ್ದ ಯುವಕ ಮೃತ್ಯು
ಅಂಗಾಂಗ ದಾನ
ಮಂಗಳೂರು, ಅ.27: ದ್ವಿಚಕ್ರ ವಾಹನವೊಂದು ಸ್ಕಿಡ್ ಆದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಮೂಡುಶೆಡ್ಡೆಯ ಗೌರವ್ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಅ.25ರಂದು ಮೂಡುಶೆಡ್ಡೆಯಲ್ಲಿ ಗೌರವ್ ಚಲಾಯಿಸುತ್ತಿದ್ದ ದ್ಚಿಚಕ್ರ ವಾಹನ ಸ್ಕಿಡ್ ಆಗಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಗೌರವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಉತ್ತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅಂಗಾಂಗ ದಾನ: ಅಪಘಾತದಲ್ಲಿ ತೀವ್ರ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ ಈ ಯುವಕನ ಅಂಗಾಗಗಳನ್ನು ಮನೆಯವರ ಇಚ್ಛೆಯಂತೆ ದಾನ ಮಾಡಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಯುವಕನ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು.
ಲಿವರನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಒಂದು ಕಿಡ್ನಿಯನ್ನು ಎಜೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅಳವಡಿಸಲಾಗಿದೆ. ಉಳಿದಂತೆ ಒಂದು ಕಿಡ್ನಿ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ಮತ್ತು 2 ಕಣ್ಣಿನ ಕಾರ್ನಿಯಾವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.