ಸಮುದ್ರ ಗಡಿ ಒಪ್ಪಂದಕ್ಕೆ ಇಸ್ರೇಲ್-ಲೆಬನಾನ್ ಸಹಿ

ಜೆರುಸಲೇಂ, ಅ.27: ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಫಲಪ್ರದವಾಗಿದ್ದು ಇಸ್ರೇಲ್ ಹಾಗೂ ಲೆಬನಾನ್ ಮಧ್ಯೆ ಸಮುದ್ರ ಗಡಿ ನಿರ್ಧರಿಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಇದರೊಂದಿಗೆ ಉಭಯ ದೇಶಗಳ ನಡುವಿನ ನೂತನ ರಾಜತಾಂತ್ರಿಕ ಬಾಂಧವ್ಯಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಒಪ್ಪಂದವನ್ನು ಅನುಮೋದಿಸುವ ಪತ್ರಕ್ಕೆ ಲೆಬನಾನ್‍ನ ಬಾಬ್ಡ ನಗರದಲ್ಲಿ ಲೆಬನಾನ್ ಅಧ್ಯಕ್ಷ ಮೈಕೆಲ್ ಆವನ್, ಜೆರುಸಲೇಂನಲ್ಲಿ ಇಸ್ರೇಲ್ ಪ್ರಧಾನಿ ಯಾಯಿರ್ ಲ್ಯಾಪಿಡ್ ಸಹಿ ಹಾಕಿದರು. ಬಳಿಕ ಗಡಿಭಾಗದ ನಖ್ವಾರದಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನೆ ಪಡೆಯ ನೆಲೆಯಲ್ಲಿ ಉಭಯ ದೇಶಗಳ ಉನ್ನತ ಮುಖಂಡರು ದಾಖಲೆ ಪತ್ರವನ್ನು ವಿನಿಮಯ ಮಾಡಿಕೊಂಡರು.
ಇದೊಂದು ಅದ್ಭುತ ಸಾಧನೆ ಎಂದು ಲ್ಯಾಪಿಡ್ ಶ್ಲಾಘಿಸಿದರೆ, ಈ ಒಪ್ಪಂದ ಉಭಯ ದೇಶಗಳ ನಡುವಿನ ನೂತನ ಅಧ್ಯಾಯದ ಆರಂಭವಾಗಿದೆ ಎಂದು ಲೆಬನಾನ್ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಒಪ್ಪಂದ ಮಾತುಕತೆಯ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕದ ಪ್ರತಿನಿಧಿ ಅಮೋಸ್ ಹೊಚ್‍ಸ್ಟೈನ್ ಲೆಬನಾನ್ ಸಂಸತ್ತಿನ ಸ್ಪೀಕರ್ ನಬೀಹ್ ಬೆರ್ರಿಯನ್ನು ಭೇಟಿಯಾದ ಬಳಿಕ ಸುದ್ಧಿಗಾರರ ಜತೆ ಮಾತನಾಡಿ, ಉಭಯ ದೇಶಗಳಲ್ಲಿ ಸರಕಾರ ಬದಲಾದರೂ ಈ ಒಪ್ಪಂದ ಮುಂದುವರಿಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.