ನಿರತ ಸಾಹಿತ್ಯ ಸಂಪದ ಬೆಳ್ಳಿಹೆಜ್ಜೆ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು, ನ.6 ರಂದು ಸಂಭ್ರಮಾಚರಣೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕುಂಜೆ ಕನ್ನಡ ಭವನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಪತ್ರಕರ್ತ ಹರೀಶ ಮಾಂಬಾಡಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಾಮಾನ್ಯ ಬರೆಹಗಾರರು, ಉದಯೋನ್ಮುಖ ಕವಿಗಳಿಗೆ ವೇದಿಕೆ ದೊರಕಿಸಿಕೊಟ್ಟ ನಿರತ ಸಾಹಿತ್ಯ ಸಂಪದದಲ್ಲಿ ಪ್ರಥಮ ಕವನವಾಚನ ಮಾಡಿದವರಿಂದು ನಾಡಿನ ಶ್ರೇಷ್ಠ ಕವಿಗಳಾಗಿ ಮೆರೆದಿದ್ದು ಇದು ನಿರತದ ಹೆಗ್ಗಳಿಕೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿರತದ ಗೌರವಾಧ್ಯಕ್ಷ ವಿ.ಸು.ಭಟ್ ಮಾತನಾಡಿ ಉತ್ಸಾಹಿ ಯುವಕರು ಆರಂಭಿಸಿದ ಸಾಹಿತ್ಯ ಸಂಪದ ಇಂದು ಬೆಳ್ಳಿಹೆಜ್ಜೆ ಯನ್ನಿಡುತ್ತಿರುವುದು ಸಂತಸದ ವಿಚಾರ ಎಂದರು.
ಕವಯತ್ರಿ ಗೀತಾ ಎಸ್. ಕೋಂಕೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಯರಾಮ ಪಡ್ರೆ, ದಿನೇಶ್ ಎಂ.ತುಂಬೆ, ವಿನೋದ್ ಪುದು, ಸಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಮಜೀದ್ ಎಸ್ ನಿರತ ಬೆಳೆದುಬಂದ ದಾರಿಯನ್ನು ವಿವರಿಸಿದರು. ನಿರತ ಅಧ್ಯಕ್ಷ ಬೃಜೇಶ್ ಅಂಚನ್ ವಂದಿಸಿದರು.







