ಮೊದಲ ದೂರವಾಣಿ ಕರೆಯಲ್ಲಿ ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ ಕುರಿತು ಮೋದಿ-ಸುನಕ್ ಚರ್ಚೆ

ಹೊಸದಿಲ್ಲಿ,ಅ.27: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಈ ವೇಳೆ ಉಭಯ ಪ್ರಧಾನಿಗಳು ಶೀಘ್ರ ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವ ಅಗತ್ಯವನ್ನು ಚರ್ಚಿಸಿದರು.
‘ಇಂದು ಸುನಕ್ ಜೊತೆ ಮಾತನಾಡಿದ್ದು ಹರ್ಷವನ್ನುಂಟು ಮಾಡಿದೆ. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ನಮ್ಮ ಸಮಗ್ರ ವ್ಯೆಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಸದೃಢಗೊಳಿಸಲು ನಾವು ಜೊತೆಯಾಗಿ ಶ್ರಮಿಸುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರ ಅಂತಿಮಗೊಳಿಸುವುದರ ಮಹತ್ವವನ್ನೂ ನಾವು ಒಪ್ಪಿಕೊಂಡಿದ್ದೇವೆ ’ ಎಂದು ಮೋದಿ ಟ್ವೀಟಿಸಿದ್ದಾರೆ.
ಮೋದಿಯವರಿಗೆ ಥ್ಯಾಂಕ್ಸ್ ಹೇಳಿರುವ ಸುನಕ್,‘ಬ್ರಿಟನ್ ಮತ್ತು ಭಾರತ ಬಹಳಷ್ಟನ್ನು ಹಂಚಿಕೊಂಡಿವೆ. ಮುಂಬರುವ ತಿಂಗಳುಗಳಲ್ಲಿ ಮತ್ತು ವರ್ಷಗಳಲ್ಲಿ ನಮ್ಮ ಭದ್ರತೆ,ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ನಮ್ಮ ಎರಡು ಮಹಾನ್ ಪ್ರಜಾಸತ್ತಾತ್ಮಕ ದೇಶಗಳು ಮಾಡಲಿರುವ ಸಾಧನೆಯ ಬಗ್ಗೆ ನಾನು ಉತ್ಕಟನಾಗಿದ್ದೇನೆ ’ ಎಂದು ಟ್ವೀಟಿಸಿದ್ದಾರೆ.





