ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಚಾಲನೆ

ಸುರತ್ಕಲ್, ಅ.28: ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕ ಸಂಘಟನೆಗಳು ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿಗೆ ಇಂದು ಚಾಲನೆ ನೀಡಲಾಗಿದೆ.
ಟೋಲ್ ಗೇಟ್ ಪರಿಸರದಲ್ಲಿ ಇಂದು ಬೆಳಗ್ಗೆಯಿಂದ ಧರಣಿ ಕುಳಿತಿರುವ ಹೋರಾಟಗಾರರು, ಭರವಸೆಗಳು ಬೇಡ, ಟೋಲ್ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದರಲ್ಲದೆ, ಅಕ್ರಮ ಟೋಲ್ ಗೇಟ್ ತೆರವು ಆಗುವವರೆಗೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಧರಣಿನಿರತರು ರಾಜ್ಯ ಬಿಜೆಪಿ ಸರಕಾರ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೈ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಉಮಾನಾಥ ಕೋಟ್ಯಾನ್ ಸೇರಿದಂತೆ ಕರಾವಳಿಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹೋರಾಟಗಾರರಾದ ವಕೀಲ ದಿನೇಶ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್, ಮಾಜಿ ಶಾಸಕ ಮೊಯ್ದಿನ್ ಬಾವ, ರಾಘವೇಂದ್ರ ರಾವ್, ಮುಹಮ್ಮದ್ ಕುಂಜತ್ತಬೈಲ್ ಮೊದಲಾದ ಪ್ರಮುಖರು ಹೋರಾಟಕ್ಕೆ ನೇತೃತ್ವ ನೀಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಎರಡು ಕೆ.ಎಸ್.ಆರ್.ಪಿ. ತುಕಡಿ ಸೇರಿದಂತೆ 100ರಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ವೆಲೆನ್ಸಿಯಾ | ಓವರ್ ಟೇಕ್ ಭರಾಟೆ: ನಿಲ್ಲಿಸಿದ್ದ ಮೊಟ್ಟೆ ಸಾಗಾಟದ ವಾಹನಕ್ಕೆ ಬಸ್ ಢಿಕ್ಕಿ