ಮೈಸೂರು ಅರಮನೆ ಮುಂಭಾಗದಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ಮೈಸೂರು, ಅ.28: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೈಸೂರು ಅರಮನೆ ಮುಂಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕನ್ನಡ ಗೀತೆಗಳನ್ನು ಹಾಡಿದರು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಡಗೀತೆ ಜೊತೆಗೆ ಉದಯವಾಗಲಿ ನಮ್ಮ ಚೆಲುವ ನಾಡು, ಕನ್ನಡ ಡಿಂಡಿಮ, ಹಚ್ಚೆವು ಕನ್ನಡದ ದೀಪ, ವಿಶ್ವ ವಿನೂತನ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿದರು. ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ನಾನಾ ಕನ್ನಡ ಸಂಘಟನೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಹಸ್ರಾರು ಸಂಖ್ಯೆಯಲ್ಲಿದ್ದ ಸಾರ್ವಜನಿಕರು ಸಹ ಕೋಟಿ ಕಂಠ ಗಾಯನಕ್ಕೆ ದನಿಗೂಡಿಸಿದರು.
ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಕನ್ನಡ ಸಂಘಗಳ ಸದಸ್ಯರು ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರಾಮದಾಸ್, ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಪೂರ್ಣಿಮಾ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹೇಮಂತ್ ಕುಮಾರ್, ಸಂಗೀತ ವಿವಿ ಕುಲಪತಿ ರವಿಕುಮಾರ್ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.