ಮಂಗಳೂರು: ನ.1ರಂದು ಆಮ್ ಆದ್ಮಿ ಪಾರ್ಟಿಯಿಂದ ಪಾದಯಾತ್ರೆ- ಸಾರ್ವಜನಿಕ ಸಭೆ

ಮಂಗಳೂರು, ಅ.28: ಆಮ್ ಆದ್ಮಿ ಪಾರ್ಟಿ ದ.ಕ. ಜಿಲ್ಲಾ ಘಟಕದ ವತಿಯಿಂದ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ನ.1ರಂದು ಮಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಎಪಿ ದ.ಕ. ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಅಪರಾಹ್ನ 3 ಗಂಟೆಯಿಂದ ಪಂಪ್‌ವೆಲ್‌ನಿಂದ ಪಾದಯಾತ್ರೆ ಆರಂಭವಾಗಲಿದೆ. 4:30ರ ಸುಮಾರಿಗೆ ಬಲ್ಮಠ ಸೋಜಾ ಆರ್ಕೇಡ್‌ನಲ್ಲಿರುವ ಪಕ್ಷದ ಕಚೇರಿ ಉದ್ಘಾಟನೆ ನೆರವೇರಲಿದೆ. ಬಳಿಕ 5:15ಕ್ಕೆ ಡಾನ್ ಬಾಸ್ಕೋ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದವರು ತಿಳಿಸಿದರು.
ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆಮ್ ಆದ್ಮಿಯ ಪ್ರಮುಖರಾದ ಮೈಕಲ್ ಡಿಸೋಜ, ಅಶೋಕ್ ಎಡಮಲೆ, ವಿವೇಕಾನಂದ ಸಾಲಿನ್ಸ್ ವೇದಿಕೆಯಲ್ಲಿ ಉಪಸ್ಥಿತರಿರುವರು. ಪಕ್ಷ ಸಂಘಟನೆಯ ನೆಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಎಎಪಿ ತನ್ನ ಸಂಘಟನೆಯನ್ನು ವಿಸ್ತರಿಸುತ್ತಿದೆ. ತಳಮಟ್ಟದಿಂದಲೇ ಸಂಘಟನೆಯನ್ನು ಬೆಳೆಸಲಾಗುತ್ತಿದೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲಿದೆ. ಪ್ರತಿ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಂತೊಷ್ ಕಾಮತ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಸಹ ಕಾರ್ಯದರ್ಶಿ ಡೆಸ್ಮಂಡ್ ಡಿಸೋಜ, ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಪ್ರಮುಖರಾದ ಸಂದೀಪ್ ಶೆಟ್ಟಿ, ಜೇಮ್ಸ್ ಡೇಸಾ ಉಪಸ್ಥಿತರಿದ್ದರು.